'ಮಸೀದಿಗೆ ಬುಲ್ಡೇಜರ್ ನುಗ್ಗಿಸಿ' ಎಂದು ಪೋಸ್ಟ್: ಪೋಸ್ಟ್ ಕಾರ್ಡ್‌ನ ಮಹೇಶ್ ವಿಕ್ರಮ್ ಹೆಗ್ಡೆ ಅರೆಸ್ಟ್




ಮಂಗಳೂರು: ಮಸೀದಿಗೆ ಬುಲ್ಡೇಜರ್ ನುಗ್ಗಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪೋಸ್ಟ್‌ಕಾರ್ಡ್ ಜಾಲತಾಣದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆಯನ್ನು ಮೂಡುಬಿದಿರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಹೇಶ್ ವಿಕ್ರಂ ಹೆಗ್ಡೆ ಪೋಸ್ಟ್‌ಕಾರ್ಡ್ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯಲ್ಲಿ ಮದ್ದೂರು ಗಣೇಶ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ "ಮಾನ್ಯ ಮುಖ್ಯ ಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಲೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ, ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂತಹ ಪ್ರಕರಣ ಮರುಕಳಿಸುವುದಿಲ್ಲ" ಎಂಬ ಬರಹವನ್ನು ಪೋಸ್ಟ್ ಮಾಡಿದ್ದರು‌. ಈ ವಿಷಯಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 143/2025 ಕಲಂ: 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಮೂಡುಬಿದಿರೆ ಪೊಲೀಸರು ಬೆಂಗಳೂರಿನಲ್ಲಿ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ವಶಕ್ಕೆ ಪಡೆದು ಮೂಡುಬಿದಿರೆಗೆ ಕರೆತಂದಿದ್ದಾರೆ‌. ಶುಕ್ರವಾರ ಅವರನ್ನು ಮೂಡುಬಿದಿರೆಯ ಸಿ.ಜೆ ಮತ್ತು ಕೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.