ಎಂ.ಸಿ.ಸಿ. ಬ್ಯಾಂಕಿನ 20ನೇ ಬೈಂದೂರು ಶಾಖೆಯ ಉದ್ಘಾಟನೆ
ಬೈಂದೂರು: ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವರವಾದದ್ದು. ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ, ಉತ್ತಮ ಸೇವೆ, ಆಡಳಿತ ಮಂಡಳಿ ಕಾರ್ಯವೈಖರಿಯ ಮೂಲಕ ಬ್ಯಾಂಕುಗಳು ಜನರ ವಿಶ್ವಾಸ ಪಡೆದುಕೊಳ್ಳುತ್ತದೆ. ಸಮಾಜಮುಖಿಯಾಗಿರುವ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ವರ್ಗದ ಜನರನ್ನು ಸೌಹಾರ್ದ, ಸಾಮರಸ್ಯೆತೆಯ ಜೀವನ ನಡೆಸಲು ಕಾರಣವಾಗಿದೆ ಎಂದು ಬೈಂದೂರಿನ ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ವಂ.ವಿನ್ಸೆಂಟ್ ಕುವೆಲ್ಹೊ ಹೇಳಿದ್ದಾರೆ.
ಬೈಂದೂರು ಮುಖ್ಯರಸ್ತೆಯ ದೀಪಾ ಕಾಂಪ್ಲೆಕ್ಸ್ನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಎಂ.ಸಿ.ಸಿ. ಬ್ಯಾಂಕು ಉತ್ತಮ ಸೇವೆಗೆ ಹೆಸರಾಗಿದೆ. ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯ, ಸ್ನೇಹಮಯ ವಾತಾವರಣವನ್ನು ಇಲ್ಲಿದೆ. ಕ್ಲಪ್ತ ಸಮಯದ ಸ್ಪಂದಿಸುವ ರೀತಿ, ಅಗತ್ಯತೆಗಳನ್ನು ಪೂರೈಸುವಿಕೆ, ಪರಿಸರದ ಬೇಡಿಕೆಯನ್ನು ಆಧರಿಸಿ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಈ ಬ್ಯಾಂಕ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು 125ನೇ ವರ್ಷ ಬ್ಯಾಂಕು ಇನ್ನಷ್ಟು ಶಾಖೆಗಳನ್ನು ತೆರೆದು ಸಾಧನೆ ಮಾಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಈ ಬ್ಯಾಂಕ್ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದು ಸ್ಪರ್ಧಾತ್ಮಕ ವಾದ ಯುಗ. ಇಲ್ಲಿ ಸ್ಪರ್ಧಾತ್ಮಕತೆಗೆ ತಕ್ಕಂತೆ ಬದುಕಬೇಕಾಗುತ್ತದೆ ಎಂದು ತಿಳಿಸಿದರು.
ನಮ್ಮ ಆಡಳಿತ ಮಂಡಳಿ 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ದಾಖಲಿಸಿದೆ. ನಾಲ್ಕು ವಿಧದ ಬ್ಯಾಂಕುಗಳಿದ್ದು ನಮ್ಮದು ಕೋ ಆಪರೇಟಿವ್ ಬ್ಯಾಂಕು ಆಗಿದೆ. ಇದೊಂದು ಹಣಕಾಸು ಸಂಸ್ಥೆ. ರಿಸರ್ವ ಬ್ಯಾಂಕಿನ ಮೇಲ್ವಿಚಾರಣೆ ಇರುತ್ತದೆ. ಹಾಗಾಗಿ ಸಾರ್ವಜನಿಕರು ವಿಶ್ವಾಸದಿಂದ ಈ ಬ್ಯಾಂಕಿನೊಂದಿಗೆ ವ್ಯವಹಾರ ಮಾಡಬಹುದಾಗಿದೆ ಎಂದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬೈಂದೂರು ಸೈಂಟ್ ಥಾಮಸ್ ರೆಸಿಡೆನ್ಶಿಯಲ್ ಸ್ಕೂಲ್ ಪ್ರಾಂಶು ಪಾಲ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ, ಶಿರೂರು ಗ್ರಾಪಂ ಉಪಾಧ್ಯಕ್ಷ ಕಾಪ್ಸಿ ನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ.ಮುಖ್ಯ ಅತಿಥಿಗಳಾಗಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿ ದ್ದರು. ಈ ಸಂದರ್ಭದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಮಾನ್ಯ, ಜಾನವಿ, ಗೌತಮಿ ಗೋಪಾಲ ಭಂಡಾರಿ, ಜೀವಿಕಾ, ರಕ್ಷಿತಾ, ನಾಗಶ್ರೀ ಅವರನ್ನು ಸನ್ಮಾನಿಸಲಾಯಿತು.
ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಕುಂದಾಪುರ ಶಾಖೆಯ ಮೆನೇಜರ್ ಜ್ಯೋತಿ ಬೆರೆಟ್ಟೊ ಸಾಧಕ ವಿದ್ಯಾರ್ಥಿಗಳ ಪರಿಚಯಿಸಿದರು. ಬೈಂದೂರು ಶಾಖೆಯ ಸಿನಿಯರ್ ಮೆನೇಜರ್ ಸಂದೀಪ್ ಕ್ವಾಡ್ರಸ್ ವಂದಿಸಿದರು. ಸ್ಟೀವನ್ ಕೊಲೆಸೊ ಕಾರ್ಯಕ್ರಮ ನಿರ್ವಹಿಸಿದರು.