ಯುವತಿಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್‌

 



ಬೆಂಗಳೂರು: ಮಹಿಳೆಯರು ಸ್ನಾನ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ ವಿಕೃತ ಕಾಮುಕನನ್ನ ಕಾಡುಗೋಡಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಹಾಜ ಮೊಯಿನುದ್ದಿನ್ ಎಂಬಾತ ಬಂಧಿತ ಆರೋಪಿ. ಚನ್ನಸಂದ್ರ ಮೂಲದ ಈತ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ. ಆದರೆ, ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡೋದನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ.

ಕಳೆದ ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ಕಾಡುಗೋಡಿ ಠಾಣಾ ವ್ಯಾಪ್ತಿಯ ಒಂದು ಮನೆಯಲ್ಲಿ ತಾಯಿ-ಮಗಳು ಸ್ನಾನಕ್ಕೆಂದು ಬಾತ್‌ರೂಮ್‌ಗೆ ತೆರಳಿದ್ದರು. ಈ ವೇಳೆ ಆರೋಪಿ ಮೊಯಿನುದ್ದಿನ್ ಕಿಟಕಿಯ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ಸಂದರ್ಭದಲ್ಲಿ ಮಗಳು ಈ ಕೃತ್ಯವನ್ನ ಗಮನಿಸಿ, ತಕ್ಷಣ ಹೊರಗೆ ಬಂದು ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ.

ಬಾಲಕಿಯ ತಂದೆ ಆತನನ್ನು ಎದುರಿಸಲು ಹೋದಾಗ, ಕಾಮುಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಆತಂಕಗೊಂಡ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಜೊತೆಗೆ, ಆತನ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.