ಪ್ರೇಯಸಿಗಾಗಿ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿದ ಯುವಕ: ಮದುವೆ ಫೋಟೊ ವೈರಲ್
Monday, May 5, 2025
ಮಧ್ಯಪ್ರದೇಶ: ಮಧ್ಯಪ್ರದೇಶದ ಜಬಲ್ಪುರದಲ್ಲೋರ್ವ ಮುಸ್ಲಿಂ ಯುವಕ ತಾನು ಪ್ರೀತಿಸಿರುವ ಯುವತಿಗಾಗಿ ಸನಾತನ ಧರ್ಮಕ್ಕೆ ಸೇರಿದ್ದಾನೆ. ಆತ ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಅದಾದ ಬಳಿಕ ಆತ ತನ್ನ ಹಿಂದೂ ಗೆಳತಿಯನ್ನು ಮದುವೆಯಾಗಿದ್ದಾನೆ. ಈ ಕುರಿತಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅನ್ ಮೊಹಮ್ಮದ್ ಹೊಲಿಗೆ ಯಂತ್ರ ರಿಪೇರಿ ಮಾಡುವವನಾಗಿ ಕೆಲಸ ಮಾಡುತ್ತಾನೆ. ಅಲ್ಲಿಗೆ ಸೃಷ್ಟಿ ಹಲ್ದಾರ್ ಹೊಲಿಗೆ ಕಲಿಯಲು ಬರುತ್ತಿದ್ದಳು. ಈ ಸಂದರ್ಭ ಇಬ್ಬರಿಗೂ ಪರಿಚಯವಾಗಿದೆ. ಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರೇಮ ಜೋಡಿ ಮದುವೆಯಾಗಲು ಬಯಸುತ್ತಿತ್ತು. ಕುಟುಂಬದ ಆಕ್ಷೇಪಣೆ ಮತ್ತು ಸಾಮಾಜಿಕ ವಿರೋಧದಿಂದಾಗಿ ಅವರಿಗೆ ಮದುವೆಯಾಗಲು ಸಾಧ್ಯವಾಗಲಿಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮೊಹಮ್ಮದ್ ದುಃಖಿತನಾಗಿದ್ದನು. ಇತ್ತೀಚೆಗೆ, ಭಯೋತ್ಪಾದಕ ದಾಳಿಯ ಬಳಿಕ, ಅನ್ ಮೊಹಮ್ಮದ್ ಇಸ್ಲಾಂ ಧರ್ಮವನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಸೃಷ್ಟಿಗೆ ತಿಳಿಸಿದ್ದಾನೆ. ಮೊಹಮ್ಮದ್ ತನ್ನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಸಿದ್ಧನಿದ್ದಾನೆ ಎಂದು ಸೃಷ್ಟಿ ತನ್ನ ಕುಟುಂಬದವರಿಗೆ ತಿಳಿಸಿದಳು.
ಮದುವೆಗೆ ಮೊದಲು ಆತನಿಗೆ ಔಪಚಾರಿಕವಾಗಿ ಹಿಂದೂ ಧರ್ಮದ ದೀಕ್ಷೆ ನೀಡಲಾಯಿತು. ಮೊದಲು ರಾಮಮಂದಿರದ ಅರ್ಚಕರು ಅವರಿಬ್ಬರಿಗೂ ಗಂಗಾ ಜಲ ಮತ್ತು ನರ್ಮದಾ ಜಲವನ್ನು ನೀಡಿದರು. ಇದಾದ ಬಳಿಕ, ತನ್ನ ಹೆಸರನ್ನು ಆನ್ ಮೊಹಮ್ಮದ್‌ನಿಂದ ಸಂಜು ಎಂದು ಬದಲಾಯಿಸಿಕೊಂಡ ಯುವಕ ಸೃಷ್ಟಿಯ ಬೈತಲೆಗೆ ಸಿಂಧೂರವನ್ನು ಇಟ್ಟು ಹೂಮಾಲೆ ವಿನಿಮಯ ಮಾಡಿಕೊಂಡಿದ್ದಾನೆ.
ಸಂಜು ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಿಂದ ನನ್ನ ಹೃದಯ ದುಃಖಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸೃಷ್ಟಿ ಸಮಾಜದೊಂದಿಗೆ ಹೋರಾಡಿ ನನ್ನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ. ಆದ್ದರಿಂದ ಹಿಂದೂ ಧರ್ಮವನ್ನು ಅಳವಡಿಸಿಕೊಂಡು ಈ ಸಂಬಂಧಕ್ಕೆ ಪೂರ್ಣ ಒಪ್ಪಿಗೆ ನೀಡುವುದು ನನ್ನ ಕರ್ತವ್ಯವಾಗಿತ್ತು. ಸ್ವತಃ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ವಿವಾಹವಾದೆ ಎಂದಿದ್ದಾರೆ.