ಮಂಗಳೂರು: ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ: ಅನ್ನನೀರಿಲ್ಲದೆ ಪರದಾಡಿದ ಆರು ಮಂದಿ ಸಿಬ್ಬಂದಿಯ ರಕ್ಷಣೆ
Friday, May 16, 2025
ಮಂಗಳೂರು: ನಗರದಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಎಂಎಸ್‌ವಿ ಸಲಾಮತ್ ಎಂಬ ಹೆಸರಿನ ಸರಕು ಹಡಗೊಂದು ಕರಾವಳಿಯಿಂದ ಸುಮಾರು 60-70 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಮುಳುಗಿದ್ದು, ಹಡಗಿನಲ್ಲಿದ್ದ 6ಮಂದಿ ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮೇ 14ರಂದು ಮಧ್ಯಾಹ್ನ 12:15ರ ಸುಮಾರಿಗೆ, ಸುರತ್ಕಲ್ ಕರಾವಳಿಯಿಂದ ಸುಮಾರು 52 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ 6ಮಂದಿ ದೋಣಿಯಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಅಲ್ಲಿ ಹಾದುಹೋಗುತ್ತಿದ್ದ ಎಂಟಿಎ ಎಪಿಕ್ ಸುಸುಯಿ ಎಂಬ ಹಡಗಿನ ಸಿಬ್ಬಂದಿ ಗುರುತಿಸಿದ್ದರು. ಇವರು ಈ ಬಗ್ಗೆ ಕೋಸ್ಟ್ ಗಾರ್ಡ್‌ಗೆ ತುರ್ತು ಸಂದೇಶ ರವಾನಿಸಿದ್ದಾರೆ. ತಕ್ಷಣ, ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಐಸಿಜಿ ಹಡಗು ವಿಕ್ರಂ ಸ್ಥಳಕ್ಕೆ ಆಗಮಿಸಿ ದೋಣಿಯನ್ನು ಪತ್ತೆಹಚ್ಚಿ, ದೋಣಿಯಲ್ಲಿದ್ದ ಆರು ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಇಸ್ಮಾಯಿಲ್ ಷರೀಫ್, ಅಲೆಮುನ್ ಅಹ್ಮದ್ ಭಾಯ್ ಘವ್ಡಾ, ಕಕಾಲ್ ಸುಲೇಮಾನ್ ಇಸ್ಮಾಯಿಲ್, ಕಾಸಂ ಇಸ್ಮಾಯಿಲ್ ಮೆಪಾನಿ, ಅಕ್ಬರ್ ಅಬ್ದುಲ್ ಸುರಾನಿ ಮತ್ತು ಅಜ್ಮಲ್ ಎಂದು ರಕ್ಷಿಸಲ್ಪಟ್ಟ ಹಡಗಿನ ಸಿಬ್ಬಂದಿ. ಈ ಆರು ಮಂದಿ ಮುಳುಗುತ್ತಿದ್ದ ಹಡಗನ್ನು ತ್ಯಜಿಸಿ ಸಣ್ಣ ದೋಣಿಗೆ ಹಾರಿ ತಪ್ಪಿಸಿಕೊಂಡಿದ್ದರು. ಆದರೆ ಒಂದು ದಿನಪೂರ್ತಿ ಅನ್ನ ನೀರಿಲ್ಲದೆ ಪರದಾಡಿದ್ದರು ಎಂದು ತಿಳಿದು ಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮಂಗಳೂರು ಬಂದರಿನಿಂದ ಮೇ 12ರಂದು ಎಂಎಸ್‌ವಿ ಸಲಾಮತ್ ಎಂಬ ಹಡಗು ಸಿಮೆಂಟ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಿಶ್ರಗಳಿದ್ದ ಸರಕನ್ನು ಹೇರಿಕೊಂಡು ಲಕ್ಷದ್ವೀಪದ ಕದ್ಮತ್ ದ್ವೀಪಕ್ಕೆ ತೆರಳಿತ್ತು. ಮೇ 14ರಂದು ಬೆಳಗ್ಗಿನ ಜಾವ 5:30ಸುಮಾರಿಗೆ ಹಡಗಿನಲ್ಲಿ ನೀರು ತುಂಬಿಕೊಳ್ಳಲಾರಂಭಿಸಿದೆ. ಪರಿಣಾಮ ಈ ಹಡಗು ಮುಳುಗಿದೆ. ನೀರು ತುಂಬಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬದುಕುಳಿದವರಿಗೆ ಪ್ರಥಮ ಚಿಕಿತ್ಸೆ ನೀಡಿ, ಮೇ 15ರಂದು ಸುರಕ್ಷಿತವಾಗಿ ನವ ಮಂಗಳೂರು ಬಂದರಿಗೆ ಕರೆತರಲಾಗಿದೆ.