ಬರೀ 21ವರ್ಷಕ್ಕೆ 12ಮದುವೆಯಾದ ಖತರ್ನಾಕ್ ವಂಚಕಿ: ಈಕೆಯ ಪ್ಲ್ಯಾನ್ ಹೇಗಿದೆ ಗೊತ್ತಾ?
Tuesday, May 6, 2025
ವಿವಾಹ ವಂಚನೆ ವಿಚಾರದಲ್ಲಿ ಈ 21 ವರ್ಷದ ಯುವತಿ ಎಂತಹ ಖತರ್ನಾಕ್ ಕೆಲಸ ಮಾಡಿದ್ದಾಳೆಂದರೆ, ಈ ಸಣ್ಣ ವಯಸ್ಸಿಗೆನೇ ಬರೋಬ್ಬರಿ 12 ಮಂದಿಯನ್ನು ಮದುವೆಯಾಗಿ ಮಹಾ ವಂಚನೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾಳೆ.
ಗುಜರಾತಿನಲ್ಲಿ ಕಾಜಲ್, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ ಮತ್ತು ಉತ್ತರ ಪ್ರದೇಶದಲ್ಲಿ ಸ್ವೀಟಿ ಎಂಬ ವಿವಿಧ ಹೆಸರಿನಲ್ಲಿ ಈಕೆ 12 ಮಂದಿಯನ್ನು ಮದುವೆ ಹೆಸರಲ್ಲಿ ವಂಚಿಸಿದ್ದಾಳೆ. ವಾಸ್ತವದಲ್ಲಿ, ಈಕೆಯ ಹೆಸರು ಗುಲ್ಮಾನಾ ರಿಯಾಜ್ ಖಾನ್. ಈಕೆ ಉತ್ತರ ಪ್ರದೇಶದ ಲಖನೌ ಮೂಲದವಳು. ಈಕೆಯ ಪ್ರತಿಯೊಂದು ಮದುವೆಯು ಈ ಹಿಂದೆಯೇ ರಚಿಸಿರುವ ಸ್ಕ್ರಿಪ್ಟ್‌ಗೆ ತಕ್ಕಂತೆ ನಡೆಯುತ್ತಿತ್ತು.
ಅಂದಹಾಗೆ, ಈ ಮದುವೆ ವಂಚನೆ ವಿಚಾರದ ಹಿಂದಿರುವುದು ಈಕೆಯೊಬ್ಬಳೇ ಅಲ್ಲ. ಆಕೆಯ ಗ್ಯಾಂಗ್‌ನ ಎಂಟು ಸದಸ್ಯರನ್ನು ಪೊಲೀಸರು ಇದೀಗ ಬಂಧನ ಮಾಡಿದ್ದಾರೆ. ಮದುವೆಯಾದ ಕೆಲವೇ ಕ್ಷಣಗಳಲ್ಲಿ ವರನ ಬೆಲೆಬಾಳುವ ವಸ್ತುಗಳೊಂದಿಗೆ ಕಣ್ಮರೆಯಾಗುವುದು ಈ ಯುವತಿಯ ಕಾರ್ಯ ವಿಧಾನವಾಗಿತ್ತು. 'ಡಾಕು ದುಲ್ಲನ್' ಎಂದು ಕರೆಯುವ ಗುಲ್ಮಾನಾಳನ್ನು ಗುರುವಾರ ಅಂಬೇಡ್ಕರ್ ನಗರದ ಬಾಷ್ಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಸದಹ ಗ್ರಾಮದ ಬಳಿ ಬಂಧಿಸಿದ್ದಾರೆ ಗ್ಯಾಂಗ್‌ನ ಎಂಟು ಸದಸ್ಯರೊಂದಿಗೆ ಆಕೆಯನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಐವರು ಮಹಿಳೆಯರು ಮತ್ತು ನಾಲ್ವರು ಪುರುಷರಿದ್ದಾರೆ. ಗಂಡು ಮಕ್ಕಳಿಗೆ ಸೂಕ್ತವಾದ ವಧುವನ್ನು ಹುಡುಕಲು ಹೆಣಗಾಡುತ್ತಿರುವ ದುರ್ಬಲ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಅನೇಕ ರಾಜ್ಯಗಳಲ್ಲಿ ಸಂಘಟಿತ ವಿವಾಹ ದಂಧೆಯನ್ನು ಈ ಗ್ಯಾಂಗ್ ನಡೆಸುತ್ತಿತ್ತು.
ಈ ಗ್ಯಾಂಗ್ ಹಲವಾರು ರಾಜ್ಯಗಳಲ್ಲಿ ಸಂಘಟಿತ ವಿವಾಹ ಜಾಲವನ್ನು ನಡೆಸುತ್ತಿತ್ತು. ಮದುವೆ ವೆಬ್ ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪುತ್ರರಿಗೆ ವಧು ಹುಡುಕಲು ಹೆಣಗಾಡುವ ಕುಟುಂಬಗಳನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಗುಲ್ಮಾನಾ, ಅನೇಕ ಹೆಸರುಗಳನ್ನು ಬದಲಾಯಿಸಿಕೊಂಡು, ಸಂಭಾವ್ಯ ವಧುವಿನಂತೆ ನಟಿಸಿ, ವರನ ಕುಟುಂಬದ ವಿಶ್ವಾಸವನ್ನು ಗಳಿಸುತ್ತಿದ್ದಳು.
ಮದುವೆಗೂ ಮೊದಲೇ ಹಣದ ಮಾತುಕತೆ ನಡೆಯುತ್ತಿತ್ತು. ಎಲ್ಲರೂ ಒಪ್ಪಿದ ಬಳಿಕ ಅದ್ಧೂರಿ ವಿವಾಹ ನೆರವೇರುತ್ತಿತ್ತು. ಮದುವೆಯಾದ ಕೆಲವೇ ಕ್ಷಣಗಳಲ್ಲಿ ಗ್ಯಾಂಗ್‌ನ ಸದಸ್ಯರು ವಧುವನ್ನು ಕರೆದೊಯ್ಯುತ್ತಿದ್ದರು. ಹೋಗುವಾಗ ವರನ ಆಭರಣಗಳು ಸೇರಿದಂತೆ ಇನ್ನಿತರ ದುಬಾರಿ ವಸ್ತುಗಳನ್ನು ಸಹ ಹೊತ್ತೊಯ್ಯುತ್ತಿದ್ದರು. ಈ ಬಗ್ಗೆ ವರನ ಕಡೆಯವರು ದೂರು ನೀಡುವ ಹೊತ್ತಿಗೆ ಇಡೀ ಗ್ಯಾಂಗ್ ತಮ್ಮ ಗುರುತನ್ನು ಬದಲಾಯಿಸಿಕೊಳ್ಳುತ್ತಿತ್ತು ಎಂದು ಲಖನೌ ಎಸ್‌ಪಿ ಕೇಶವ್ ಕುಮಾರ್ ತಿಳಿಸಿದ್ದಾರೆ.
ಅಂದಹಾಗೆ, ಗುಲ್ಮಾನಾ ಕಾನೂನುಬದ್ದವಾಗಿ ರಿಯಾಜ್ ಖಾನ್ ಎಂಬಾತನನ್ನು ಮದುವೆಯಾಗಿದ್ದಾಳೆ. ರಿಯಾಜ್ ಜಾನ್‌ಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪತ್ನಿಯ ಸರಣಿ ಹಗರಣಗಳ ಬಗ್ಗೆ ತಿಳಿದಿದ್ದ ರಿಯಾಜ್ ಖಾನ್‌ಗೆ ವಂಚನೆಯಿಂದ ಬರುತ್ತಿದ್ದ ಹಣದಲ್ಲಿ ಶೇ. 5ರಷ್ಟು ಪಾಲು ಸಿಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣದ ರೋಕ್ಟಕ್ ನಿವಾಸಿ ಸೋನು ಎಂಬುವವರನ್ನು ವಂಚಿಸಿದ ಬಳಿಕ ಗ್ಯಾಂಗ್‌ನ ರಹಸ್ಯ ಬಯಲಾಗಿದೆ. ಮದುವೆಯಾದ ಕೆಲವೇ ಗಂಟೆಗಳ ನಂತರ, ವಧು ಕಣ್ಮರೆಯಾದಾಗ, ಸೋನು ತುರ್ತು ಸಹಾಯವಾಣಿ 112 ಮೂಲಕ ಯುಪಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ತಡಮಾಡದೇ ತಕ್ಷಣ ತನಿಖೆಗೆ ಇಳಿದ ಅಂಬೇಡ್ಕರ್ ನಗರ ಪೊಲೀಸರು, ಒಬ್ಬ ಗ್ಯಾಂಗ್ ಸದಸ್ಯರನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ವಿಚಾರಣೆ ಮಾಡಿದಾಗ, ಆತ ಪೊಲೀಸರನ್ನು ಇತರರ ಬಳಿಗೆ ಕರೆದೊಯ್ದನು. ಬಳಿಕ ಎಲ್ಲರನ್ನೂ ಬಂಧಿಸಲಾಯಿತು.
ಬಂಧಿತರನ್ನು ಜಿಂದ್‌ನ ಮೋಹನ್‌ಲಾಲ್ (34), ರತನ್ ಕುಮಾರ್ ಸರೋಜ್ (32), ರಂಜನ್ ಅಲಿಯಾಸ್ ಅಶು ಗೌತಮ್ (22), ಜಾನ್‌ಪುರದ ಮಂಜು ಮಾಲಿ (29), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಸನ್ನೋ ಅಲಿಯಾಸ್ ಸುನೀತಾ (36), ಪೂನಂ (33) ಮತ್ತು ರುನ್ಸಾರ್ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ 72,000 ರೂ. ನಗದು, ಒಂದು ಮೋಟಾರ್ ಸೈಕಲ್, 11 ಮೊಬೈಲ್ ಫೋನ್‌ಗಳು, ಒಂದು ಚಿನ್ನದ ಮಂಗಳಸೂತ್ರ ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖಾಧಿಕಾರಿಗಳು ಹೇಳುವಂತೆ ಈ ಗ್ಯಾಂಗ್ ಸ್ಪಷ್ಟ ಪಾತ್ರಗಳನ್ನು ಹೊಂದಿತ್ತು. ಗುಲ್ಮಾನಾ ನೇತೃತ್ವದ ಮಹಿಳೆಯರು ವಂಚನೆಯ ರಂಗವನ್ನು ನಿರ್ವಹಿಸುತ್ತಿದ್ದರು. ಅಂದರೆ, ನಂಬಿಕೆಯನ್ನು ಬೆಳೆಸುವುದು, ನಕಲಿ ದಾಖಲೆಗಳನ್ನು ರಚಿಸುವುದು ಮತ್ತು ಕುಟುಂಬಗಳನ್ನು ಮನವೊಲಿಸುವುದು. ಇನ್ನು ಪುರುಷರು ಹೇಗೆ ತಪ್ಪಿಸಿಕೊಳ್ಳುಬೇಕೆಂದನ್ನು ಪ್ಲಾನ್ ಮಾಡುತ್ತಿದ್ದರು. ಈ ಗ್ಯಾಂಗ್ ವಿವಿಧ ರಾಜ್ಯಗಳಲ್ಲಿ ವಂಚನೆಯ ವಿವಾಹಗಳಿಗೆ ತನ್ನದೇಯಾದ ಜಾಲವನ್ನು ಸ್ಥಾಪಿಸಿದೆ.
ಮದುವೆ ವೆಬ್‌ಸೈಟ್‌ಗಳಲ್ಲಿ ವಧುಗಳನ್ನು ಹುಡುಕಾಡಲು ಪರದಾಡುವ ಕುಟುಂಬಗಳನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಚಿತ್ರಗಳೊಂದಿಗೆ ಖಾತೆಗಳನ್ನು ತೆರೆಯುತ್ತಿದ್ದರು. ಆಸಕ್ತಿ ವ್ಯಕ್ತಪಡಿಸುವ ಪಾಲಕರೊಂದಿಗೆ ಮಾತನಾಡಿ ಮದುವೆಯನ್ನು ವಿಚಾರವನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಮೊದಲು ಅವರಿಂದ ಉತ್ತಮ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದರು. ಇದಾದ ನಂತರ ಅದ್ದೂರಿ ಮದುವೆಯಾಗಿ, ಕೆಲವೇ ಗಂಟೆಗಳು ಅಥವಾ ದಿನಗಳಲ್ಲಿ ಮೋಟಾರ್ ಸೈಕಲ್ ಗ್ಯಾಂಗ್, ವಧುವನ್ನು ಕಿಡ್ನಾಪ್ ಮಾಡುತ್ತಿತ್ತು. ಬಳಿಕ ಅವರ ಯಾವುದೇ ಕುರುಹು ಸಿಗದಂತೆ ಪರಾರಿಯಾಗುತ್ತಿದ್ದರು.
ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಕುಮಾರ್ ಹೇಳಿದರು. ಈ ಗ್ಯಾಂಗ್ ಕನಿಷ್ಠ 12 ಅಪರಾಧಗಳನ್ನು ಒಪ್ಪಿಕೊಂಡಿದೆ ಮತ್ತು ಹೆಚ್ಚಿನ ಸಂತ್ರಸ್ತರು ಮುಂದೆ ಬರುವ ನಿರೀಕ್ಷೆಯಿದೆ ಎಂದು ಕುಮಾರ್ ಅವರು ತಿಳಿಸಿದರು.