ತಂದೆಯ ಸ್ನೇಹಿತನೆಂದು ಕರೆ ಮಾಡಿದ ಸೈಬರ್ ವಂಚಕನಿಗೆ ಚಳ್ಳೇ ಹಣ್ಣು ತಿನ್ನಿಸಿದ ಯುವತಿ: ವೀಡಿಯೋ ವೈರಲ್



ಹೊಸದಿಲ್ಲಿ: ವಿನೂತನ ತಂತ್ರಗಳೊಂದಿಗೆ ಜನತೆಯನ್ನು ಸೈಬ‌ರ್ ವಂಚಕರು ಮೋಸ ಮಾಡುತ್ತಿರುತ್ತಾರೆ. ಅಂತಹದೇ ಪ್ರಕರಣವೊಂದರಲ್ಲಿ ವಂಚಕನಿಗೆ ಯುವತಿಯೊಬ್ಬಳು ಚಳ್ಳೆಹಣ್ಣು ತಿನ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿಗೆ ಕರೆ ಮಾಡಿರುವ ಸೈಬರ್ ವಂಚಕನೋರ್ವನು 'ತಾನು ನಿನ್ನ ತಂದೆಯ ಸ್ನೇಹಿತ' ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆಕೆಯ ತಂದೆಯ ಕೋರಿಕೆಯ ಮೇರೆಗೆ ತಾನು ಯುಪಿಐ ಖಾತೆಗೆ ಹಣ ಹಾಕುತ್ತಿದ್ದೇನೆ ಎಂದು ನಂಬಿಸಲು ಪ್ರಯತ್ನಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ವಂಚಕನು ಯುಪಿಐ ಮೂಲಕ ಅವಳಿಗೆ 12,000 ರೂ.ಗಳನ್ನು ಕಳುಹಿಸುವುದಾಗಿ ಹೇಳುತ್ತಾನೆ. ಈಗಾಗಲೇ 10 ಸಾವಿರ ರೂ.ಗಳನ್ನು ಕಳುಹಿಸಿದ್ದೇನೆ ಎಂದು ವಂಚಕ ಹೇಳಿಕೊಂಡಿದ್ದು, ಅದಕ್ಕೆ ಪೂರಕವಾಗಿ ನಕಲಿ ಎಸ್‌ಎಂಎಸ್ ಅನ್ನು ಕೂಡಾ ಆಕೆಯ ಫೋನ್‌ಗೆ ಫಾರ್ವರ್ಡ್ ಮಾಡಿದ್ದನು.

ಬಳಿಕ 2000 ರೂ.ಗಳನ್ನು ಹಾಕುವ ಬದಲಾಗಿ 20,000 ಸಾವಿರ ರೂ. ಹಾಕಿದ್ದೇನೆ, 18 ಸಾವಿರ ರೂ.ಗಳನ್ನು ಮರಳಿ ಕಳುಹಿಸುವಂತೆ ಆತ ಯುವತಿಗೆ ಹೇಳಿದ್ದಾನೆ. ಆದರೆ, ಈ ಎಸ್‌ಎಮ್‌ಎಸ್ ಬ್ಯಾಂಕ್ ನಿಂದ ಬಂದದ್ದಲ್ಲ ಬದಲಾಗಿ ವೈಯಕ್ತಿಕ ಸಂಖ್ಯೆಯಿಂದ ಬಂದಿದೆ ಎಂಬುದನ್ನು ಗಮನಿಸಿದ ಯುವತಿ, ವಂಚಕನ ತಂತ್ರವನ್ನು ಅರಿತಿದ್ದಾಳೆ. ಆದ್ದರಿಂದ 18,000 ರೂ.ವನ್ನು ವಾಪಸ್ ಕಳುಹಿಸಿದ್ದೇನೆ ಎಂದು ತೋರಿಸುವ ನಕಲಿ ಎಸ್‌ಎಂಎಸ್‌ ಸಂದೇಶವನ್ನು ಆತನಿಗೆ ರವಾನಿಸುತ್ತಾಳೆ.

ಆಗ, ತನ್ನ ಬಂಡವಾಳ ಬಾಲಕಿಗೆ ತಿಳಿದಿದೆ ಎಂದು ಮನಗಂಡ ವಂಚಕ ಸೋಲೊಪ್ಪಿಕೊಂಡಿದ್ದಾನೆ. ಸದ್ಯ ವಂಚಕನ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಯುವತಿಯ ವೀಡಿಯೋ ಜನರ ಗಮನ ಸೆಳೆದಿದೆ.