ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್- ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್, ವಿನಯ್‌ಗೆ ಎದುರಾಯ್ತು ಸಂಕಷ್ಟ



ಬೆಂಗಳೂರು: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಅವರುಗಳು ಲಾಂಗ್ ಹಿಡಿದು ರೀಲ್ಸ್ ಮಾಡಿ ಸಂಕಷ್ಟ ತಂದುಕೊಂಡಿದ್ದಾರೆ.

ಬಿಗ್ ಬಾಸ್ ಬಳಿಕ ಕಿರುತೆರೆಯ ಇತರೆ ಶೋಗಳಲ್ಲಿ ಕಾಣಿಸಿಕೊಂಡಿರುವ ರಜತ್ ಕಿಶನ್ ಹಾಗೂ ವಿನಯ್ ಗೌಡ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ.

ಬಿಗ್‌ಬಾಸ್ ಸೀಸನ್ 10ರಲ್ಲಿ ವಿನಯ್ ಕಾಣಿಸಿಕೊಂಡಿದ್ದರು. ಅದೇ ರೀತಿ ಬಿಗ್‌ಬಾಸ್ ಸೀಸನ್ 11ರಲ್ಲಿ ರಜತ್ ಕಿಶನ್ ಕಾಣಿಸಿಕೊಂಡಿದ್ದರು. ಇಬ್ಬರೂ ಕಿರುತೆರೆಯಲ್ಲಿ ಹೆಸರು ಮಾಡಿದವರು. ಸದ್ಯ ರಿಯಾಟಲಿ ಶೋವೊಂದರಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಇಬ್ಬರ ವಿರುದ್ಧ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ.

ವಿನಯ್ ಹಾಗೂ ರಜತ್ ಇಬ್ಬರೂ ಗೆಳೆಯರಾಗಿದ್ದಾರೆ. ಇತ್ತೀಚೆಗೆ ಇಬ್ಬರೂ ಜತೆಯಾಗಿಕೊಂಡು ರೀಲ್ಸ್ ಮಾಡಿದ್ದರು. ಬರೀ ರೀಲ್ಸ್ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ರೀಲ್ಸ್ ಮಾಡುವಾಗ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದು, ಇಬ್ಬರಿಗೂ ಸಂಕಷ್ಟ ತಂದಿಟ್ಟಿದೆ.

ಲಾಂಗ್ ಹಿಡಿದು ವಿಡಿಯೋ ಮಾಡಿರುವ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆ‌ರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ.

ಅಂದಹಾಗೆ ವಿನಯ್, ರಜತ್ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲಾಂಗ್, ಮಚ್ಚು, ಗನ್ ಅಸಲಿ ಇರಲಿ ಅಥವಾ ನಕಲಿ ಇರಲಿ ಇಂತಹ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರೀಲ್ಸ್ ಮಾಡುವಂತಿಲ್ಲ. ಈ ರೀತಿ ರೀಲ್ಸ್ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಆದ್ದರಿಂದ ವಿನಯ್, ರಜಯ್ ಮೇಲೆ ಈ ಕ್ರಮ ಆಗಿದೆ.