ಕೇರಳ: ಕಿರಿಯ ವಿದ್ಯಾರ್ಥಿಗಳ ಖಾಸಗಿ ಭಾಗಕ್ಕೆ ಡಂಬಲ್ಸ್ ನೇತುಹಾಕಿ ಕೈವಾರದಿಂದ ಚುಚ್ಚಿ ರ‌್ಯಾಗಿಂಗ್- ಐವರು ವಿದ್ಯಾರ್ಥಿಗಳು ಅರೆಸ್ಟ್


ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಭಯಾನಕ ರ‌್ಯಾಗಿಂಗ್ ಪ್ರಕರಣವೊಂದು ಬಯಲಾಗಿದೆ. ಐವರು ಹಿರಿಯ ವಿದ್ಯಾರ್ಥಿಗಳು ಮೂವರು ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಅವರ ಖಾಸಗಿ ಭಾಗಕ್ಕೆ ಡಂಬಲ್ಸ್‌ಗಳನ್ನು ನೇತುಹಾಕಿ, ಕೈವಾರದಿಂದ ಇರಿದು ಕ್ರೂರವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಎನ್‌.ಎಸ್‌.ಜೀವಾ, ಕೆ.ಪಿ.ರಾಹುಲ್ ರಾಜ್, ಸಿ.ರಿಜಿಲ್ ಜಿತ್ ಮತ್ತು ವಿವೇಕ್ ಎನ್.ಪಿ ಎಂಬ ಐವರು ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 

ತಿರುವನಂತಪುರಂ ಮೂಲದ ಮೂವರು ವಿದ್ಯಾರ್ಥಿಗಳು ತಮ್ಮ ಮೇಲೆ ನವೆಂಬರ್ 2024ರಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಆರೋಪವೇನು?

'ನಮ್ಮನ್ನು ಬೆತ್ತಲೆಗೊಳಿಸಿ ಖಾಸಗಿ ಭಾಗಕ್ಕೆ ಡಂಬಲ್ಸ್ ಗಳನ್ನು ನೇತುಹಾಕಿತ್ತಾರೆ. ಬಳಿಕ ಕೈವಾರದಿಂದ ಇರಿಯುತ್ತಾರೆ. ಆವಾಗ ಆದ ಗಾಯಗಳಿಗೆ ಲೋಷನ್ ಹಚ್ಚಿ ಹೆಚ್ಚು ನೋವನ್ನುಂಟು ಮಾಡುತ್ತಾರೆ. ನೋವಿನಿಂದ ಕಿರುಚಾಡಿದಾಗ ಬಾಯಿಗೆ ಲೋಷನ್ ಹಾಕಿದ್ದಾರೆ. ಇದಲ್ಲದೆ ನಮಗೆ ಕ್ರೂರವಾಗಿ ಥಳಿಸಲಾಗಿದೆ. ಕೃತ್ಯದ ವೀಡಿಯೊ ಚಿತ್ರೀಕರಿಸಿದ್ದಾರೆ. ರ್ಯಾಗಿಂಗ್ ಬಗ್ಗೆ ದೂರು ನೀಡಿದರೆ ಶೈಕ್ಷಣಿಕ ಭವಿಷ್ಯವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ರವಿವಾರದಂದು ಮದ್ಯಪಾನಕ್ಕೆ ನಮ್ಮಿಂದ ಹಣ ವಸೂಲಿ ಮಾಡುತ್ತಿದ್ದರು. ಹಣ ಕೊಡದಿದ್ದರೆ ಥಳಿಸುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಹಿರಿಯ ವಿದ್ಯಾರ್ಥಿಗಳ ಕಿರುಕುಳ ತಾಳಲಾರದೆ ಕಿರಿಯ ವಿದ್ಯಾರ್ಥಿಯೋರ್ವನು ತನ್ನ ತಂದೆಗೆ ತಿಳಿಸಿದ್ದು ಈ ಮೂಲಕ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪ್ರಥಮ ವರ್ಷದ ಮೂವರು ನರ್ಸಿಂಗ್‌ ವಿದ್ಯಾರ್ಥಿಗಳು ಕೊಟ್ಟಾಯಂ ಗಾಂಧಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.