ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದಲ್ಲಿ 250 ರೂ. ಮೌಲ್ಯದ 5ಲೀ. ಹಾಲು ನಷ್ಟ ಮೊಕದ್ದಮೆ ಹೂಡಿದ ಬಿಹಾರಿ ಬಾಬು




ಪಟನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ 250 ರೂ. ಮೌಲ್ಯದ 5 ಲೀಟರ್ ಹಾಲು ನಷ್ಟವಾಗಲು ಕಾರಣ ಎಂದು ಆರೋಪಿಸಿ ಬಿಹಾರದ ನಿವಾಸಿ ಒಬ್ಬರು ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ವಿಚಿತ್ರ ಘಟನೆ ಇಲ್ಲಿನ ಸಮಷ್ಟಿಪುರ ಜಿಲ್ಲೆಯಲ್ಲಿ  ನಡೆದಿದೆ.

ಕಳೆದ ವಾರ ರಾಹುಲ್ ಗಾಂಧಿ ನೀಡಿರುವ ‘ಭಾರತದ ವಿರುದ್ಧ ಇಂದು ಕಾಂಗ್ರೆಸ್‌ ಹೋರಾಡುತ್ತಿದೆ’ ಎಂಬ ಹೇಳಿಕೆ ಕೇಳಿ ತನಗೆ ಆಘಾತವಾಗಿತ್ತು. ಆಗ ತನ್ನ ಕೈಯಲ್ಲಿದ್ದ 5 ಲೀಟರ್ ಹಾಲಿನ ಪಾತ್ರೆ ಕೆಳಗೆ ಬಿದ್ದಿದೆ. ಪ್ರತಿ ಲೀಟರ್ ಹಾಲಿಗೆ 50 ರೂ. ಬೆಲೆಯಿದ್ದು, ನನಗೆ 250 ರೂ. ನಷ್ಟವಾಗಿದೆ. ರಾಹುಲ್ ಗಾಂಧಿ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ’ ಎಂದು ದೂರುದಾರ ಮುಖೇಶ್ ಚೌಧರಿ ಆರೋಪಿಸಿದ್ದಾರೆ.

ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 152 ಸೇರಿದಂತೆ ಭಾರತೀಯ ನಾಗರಿಕ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಆದರೆ ಈ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ರಾಹುಲ್ ಗಾಂಧಿಯವರು, ‘ಇಂದು ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಆಕ್ರಮಿಸಿದೆ. ಆದ್ದರಿಂದ ಇಂದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಾವು ಹೋರಾಡುತ್ತಿದ್ದು, ಇದು ಭಾರತದ ವಿರುದ್ಧವೇ ಹೋರಾಡಿದಂತಿದೆ’ ಎಂದಿದ್ದರು.