ಬಿಎಸ್‌ಎನ್‌ಎಲ್‌‌ಗೆ ಪೋರ್ಟ್ ಆದ 8ಲಕ್ಷ ಗ್ರಾಹಕರು: ಆಫರ್ ನೀಡಿದರೂ ಒಂದು ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಎರ್‌ಟೆಲ್, ವಿಐ



ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌‌ಗೆ ಸತತ 3ನೇ ತಿಂಗಳೂ ಗ್ರಾಹಕರು ಪೋರ್ಟ್ ಆಗುತ್ತಿದ್ದಾರೆ. ಖಾಸಗಿ ಒಡೆತನದ ಜಿಯೋ, ಎರ್‌ಟೆಲ್, ವಿಐ ದುಬಾರಿಯಾಗುತ್ತಿದ್ದಂತೆ ಗ್ರಾಹಕರು ಪೋರ್ಟ್ ಆಗುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ BSNLಗೆ 8ಲಕ್ಷ ಮಂದಿ ಗ್ರಾಹಕರು ಪೋರ್ಟ್ ಆಗಿದ್ದಾರೆ. ಇವರೆಲ್ಲರೂ ಜಿಯೋ, ಎರ್‌ಟೆಲ್, ವಿಐ ನೆಟ್‌ವರ್ಕ್‌ನಿಂದ ಪೋರ್ಟ್ ಆಗಿ BSNL ಸೇರಿಕೊಂಡಿದ್ದಾರೆ. ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಜಿಯೋ, ಎರ್ ಟೆಲ್ ಹಾಗೂ ವಿಐ ಸಂಸ್ಥೆಗಳು ಬರೋಬ್ಬರಿ 1 ಕೋಟಿಗೂ ಅಧಿಕ ಗ್ರಾಹಕರನ್ನು ಕಳೆದುಕೊಂಡಿದೆ.


ಸೆಪ್ಟೆಂಬರ್ ತಿಂಗಳ ಡೇಟಾವನ್ನು ಟ್ರಾಯ್(TRAI) ಬಿಡುಗಡೆ ಮಾಡಿದೆ. ತನ್ನ ಸಾಂಪ್ರದಾಯಿಕ ಆಫರ್, ದುಬಾರಿ ಅನ್ನೋ ಹೊರೆಯಿಲ್ಲ, 4ಜಿ ನೆಟ್‌ವರ್ಕ್ ಹೊಂದಿರುವ BSNL‌ಗೆ ಸೆಪ್ಟೆಂಬರ್ ತಿಂಗಳಲ್ಲಿ 8.5 ಲಕ್ಷ ಗ್ರಾಹಕರು ಪೋರ್ಟ್ ಮೂಲಕ ಸೇರಿಕೊಂಡಿದ್ದಾರೆ. BSNLಗೆ ಇದೀಗ ಪ್ರತಿ ತಿಂಗಳು ಗ್ರಾಹಕರು ಗಣನೀಯ ಪ್ರಮಾಣದಲ್ಲಿ ಏರಿಕೊಳ್ಳುತ್ತಿದ್ದಾರೆ. ದುಬಾರಿ ರೀಚಾರ್ಜ್ ಪ್ಲ್ಯಾನ್ ಜಾರಿಗೊಳಿಸರುವ ಬೆನ್ನಲ್ಲೇ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ತೀವ್ರ ಹೊಡೆತ ಬಿದ್ದಿದೆ. ಪ್ರತಿದಿನ ಖಾಸಗಿ ಟೆಲಿಕಾಂಗಳಿಂದ ಪೋರ್ಟ್ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. 


ಸೆಪ್ಟೆಂಬರ್‌ನಲ್ಲಿ ರಿಲಯನ್ಸ್ ಜಿಯೋ 79.69 ಲಕ್ಷ ಗ್ರಾಹಕರನ್ನು ಕಳೆದುಕೊಂಡಿತ್ತು. ಇದೀಗ ಜಿಯೋ ವೈಯರ್‌ಲೆಸ್ ಸಬ್‌ಸ್ಕ್ರೈಬರ್ ಒಟ್ಟು ಸಂಖ್ಯೆ 46.37 ಕೋಟಿಯಷ್ಟು ಇಳಿಕೆಯಾಗಿದೆ. ಇನ್ನು ಭಾರ್ತಿ ಎರ್‌ಟೆಲ್ ಸೆಪ್ಟೆಂಬರ್ ತಿಂಗಳಲ್ಲಿ 14.24 ಲಕ್ಷ ಗ್ರಾಹಕರ ಕಳೆದುಕೊಂಡಿದೆ. ಸದ್ಯ ಎರ್‌ಟೆಲ್ ವೈಯರ್‌ಲೆಸ್ ಸಬ್‌ಸ್ಕ್ರೈಬರ್ ಸಂಖ್ಯೆ 38.34 ಕೋಟಿ. ಇನ್ನು ವೋಡಾಫೋನ್ ಐಡಿಯಾ ಸೆಪ್ಟೆಂಬರ್ ತಿಂಗಲ್ಲಿ 15.53 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇದೀಗ ವಿಐ ವೈಯರ್‌ಲೆಸ್ ಒಟ್ಟು ಸಬ್‌ಸ್ಕ್ರೈಬರ್ ಸಂಖ್ಯೆ 21.34 ಕೋಟಿ. 


ಜುಲೈನಿಂದ ಈ ಪೋರ್ಟ್ ಬೆಳವಣಿಗೆ ಹೆಚ್ಚಾಗಿ ನಡೆಯುತ್ತಿದೆ. ಕಾರಣ 2024ರ ಜುಲೈನಲ್ಲಿ ಜಿಯೋ, ಎರ್ ಟೆಲ್, ವಿಐ ಎಲ್ಲಾ ರೀಚಾರ್ಜ್ ಮೊತ್ತ ಏರಿಕೆ ಮಾಡಿತ್ತು. ಶೇಕಡಾ 10ರಿಂದ 27ರಷ್ಟು ಮೊತ್ತ ಏರಿಕೆಯಾಗಿತ್ತು. ಇದೇ ವೇಳೆ BSNL ತನ್ನ ಸೇವೆಯನ್ನು ಸುಧಾರಿಸುವತ್ತ ಗಮನಹರಿಸಿತ್ತು. 4ಜಿ ಸೇವೆ, ಎಲ್ಲೆಡೆ ನೆಟ್‌ವರ್ಕ್, ಕಡಿಮೆ ರೀಚಾರ್ಜ್ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸಿತ್ತು. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ 8.49 ಲಕ್ಷ ಗ್ರಾಹಕರು BSNL‌ಗೆ ಪೋರ್ಟ್ ಆಗಿದ್ದಾರೆ. ಇದೀಗ BSNL ವೈಯರ್‌ಲೆಸ್ ಸಬ್‌ಸ್ಕ್ರೈಬರ್ ಒಟ್ಟು ಸಂಖ್ಯೆ 9.18 ಕೋಟಿ.


ಲಕ್ಷ ಲಕ್ಷ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದರು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮಾರ್ಕೆಟ್ ಲೀಡರ್ ಆಗಿ ಸಾಗಿದೆ. ಭಾರತದ ಮೊಬೈಲ್ ಬಳಕೆದಾರರರ ಮಾರುಕಟ್ಟೆಯಲ್ಲಿ ಜಿಯೋ ಶೇಕಡಾ 40.2ರಷ್ಟು ಪಾಲು ಹೊಂದಿದೆ. ಇನ್ನು ಏರ್ಟೆಲ್ ಶೇಕಡಾ 33.24, ವೋಡಾಫೋನ್ ಐಡಿಯಾ ಶೇಕಡಾ 18.4ರಷ್ಟು ಹಾಗೂ ಬಿಎಸ್‌ಎನ್‌ಎಲ್ ಶೇಕಡಾ 7.98ರಷ್ಟು ಪಾಲು ಹೊಂದಿದೆ.