ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಬೆಂಕಿಹಚ್ಚಿ ಹತ್ಯೆ
Monday, October 21, 2024
ತಿರುಪತಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಬೆಂಕಿ ಹಚ್ಚಿ ಕೊಲೆಗೈದ ಪೈಶಾಚಿಕ ಕೃತ್ಯ ಕಡಪಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತೀವ್ರ ಸುಟ್ಟ ಗಾಯಗಳಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ರವಿವಾರ ರಾಜೀವ್ ಗಾಂಧಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾಳೆ.
ಆರೋಪಿ ಜಕ್ಕಲ ವಿಪ್ಪೇಶ್ (20) ಎಂಬಾತನನ್ನು ಬಂಧಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ವಿಶೇಷ ನ್ಯಾಯಾಲಯದಲ್ಲಿ ಪೂರ್ಣಗೊಳಿಸಿ ಆರೋಪಿಗೆ ಮರಣ ದಂಡನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಪೊಲೀಸರಿಗೆ ಸೂಚಿಸಿದ್ದಾರೆ.
ಆರೋಪಿ ವಿಶ್ಲೇಶ್ ಹಾಗೂ ಸಂತ್ರಸ್ತ ಯುವತಿ ಬಾಲ್ಯ ಸ್ನೇಹಿತರಾಗಿದ್ದರು. ಒಬ್ಬರನ್ನೊಬ್ವರು ಪ್ರೀತಿಸುತ್ತಿದ್ದರು. ಆಕೆ ಇದೀಗ ಗರ್ಭಿಣಿ. ಆದರೆ ಆರೋಪಿ ಈಕೆಯನ್ನು ಬಿಟ್ಟು ಬೇರೊಬ್ಬಳೊಂದಿಗೆ ವಿವಾಹವಾಗಿದ್ದ ಎಂದು ಎಸ್ಪಿ ಹರ್ಷವರ್ಧನ ರಾಜು ಹೇಳಿದ್ದಾರೆ. ಬಾಲ್ಯಸ್ನೇಹಿತೆಯಾಗಿದ್ದ ಯುವತಿ ತನ್ನನ್ನು ವಿವಾಹವಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಮುಗಿಸುವ ಸಂಚು ರೂಪಿಸಿ ಈ ಕೃತ್ಯಕ್ಕೆ ಮುಂದಾದ ಎಂದು ಅವರು ವಿವರಿಸಿದ್ದಾರೆ.