ಮಂಗಳೂರು: ''ತನ್ನನ್ನು ನಿರ್ಲಕ್ಷ್ಯ'' ಮಾಡಿದ್ದಾರೆಂದು ಡಿಸಿ ವಿರುದ್ಧ ಕೆಂಡಕಾರಿದ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್


ಮಂಗಳೂರು: ಪಿಲಿಕುಳ ಸರಕಾರಿ ಕಂಬಳ ನಡೆಸುವ ವಿಚಾರದಲ್ಲಿ ಕ್ಷೇತ್ರದ ಶಾಸಕನಾಗಿರುವ ತನ್ನ ಸಮಕ್ಷಮದಲ್ಲಿ ಸಭೆಯನ್ನು ಮಾಡದೆ, ಸರಿಯಾಗಿ ಮಾಹಿತಿ ನೀಡದೆ ದ‌ಕ.ಜಿಲ್ಲಾಧಿಕಾರಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮುಲ್ಕಿ-ಮೂಡುಬಿದಿರೆ ಉಮಾನಾಥ ಕೋಟ್ಯಾನ್ ಅವರು ಕೆಂಡಕಾರಿದ್ದಾರೆ.

ಸರಕಾರದ ವತಿಯಿಂದ ಪಿಲಿಕುಳದಲ್ಲಿ ಕಂಬಳ ಆಯೋಜಿಸಲಾಗಿದೆ. ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ನನಗೆ ಡಿಸಿ ಮುಲ್ಲೈ ಮುಹಿಲನ್ ಅವರು ಮಾಹಿತಿ ನೀಡಿಲ್ಲ. ಜಿಲ್ಲಾ ಕಂಬಳ ಸಮಿತಿಯ ನಿರ್ಧಾರದ ಪ್ರಕಾರ ಪಿಲಿಕುಳದಲ್ಲಿಯೂ ಕಂಬಳ ಇದೆ ಎಂದು ನನಗೆ ಗೊತ್ತಾಗಿದೆ. ಸರಕಾರಿ ಕಂಬಳಕ್ಕೆ ಸಮಿತಿಯ ಅಧ್ಯಕ್ಷ ಆಯಾ ಕ್ಷೇತ್ರದ ಶಾಸಕನೇ ಆಗಬೇಕು ಎಂಬ ನೀತಿಸಂಹಿತೆ ಇದೆ. ಸೆಪ್ಟೆಂಬರ್ 4ರಂದು ಈ ಬಗ್ಗೆ ಸಭೆ ನಡೆದಿದೆ‌. ಅದರ ಬಗ್ಗೆಯೂ ನನಗೆ ಮಾಹಿತಿ ನೀಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ನಡೆದಾಗಲೂ ನನ್ನ ಗಮನಕ್ಕೆ ತರಲಿಲ್ಲ. ಕೆಂಜಾರು ಮಳೆ ಹಾನಿ ಸಂದರ್ಭ ನಡೆದ ಸಭೆಗೂ ಡಿಸಿಯಿಂದ ಆಹ್ವಾನವಿಲ್ಲ ಎಂದರು. 

ಹಿಂದುಳಿದ ವರ್ಗದ ಶಾಸಕ ಎಂದು ಜಿಲ್ಲಾಧಿಕಾರಿ ತನ್ನನ್ನು ತಿರಸ್ಕರಿಸಿ ಅವಮಾನ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲಾಧಿಕಾರಿಗೆ ರಾಜಕೀಯ ಮಾಡಲು ಇಚ್ಚೆ ಇದ್ದರೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿ. ಇವನು ಡಿಸಿ ಕಲಿತು ಬಂದಿದ್ದಾನಾ ಅಥವಾ ಕಲಿಯದೇ ಬಂದಿದ್ದಾನಾ ಗೊತ್ತಿಲ್ಲ. ಡಿಸಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡ್ತಾನಾ? ಎಂದು ಏಕವಚನದಲ್ಲಿ ಅವರು ಡಿಸಿಯನ್ನು ನಿಂದಿಸಿದರು.

ಪಿಲಿಕುಳ ಉತ್ಸವ ಮಾಡಲು ನಮ್ಮ ಆಕ್ಷೇಪ ಇಲ್ಲ, ಆದರೆ ನಮ್ಮನ್ನ ಬಿಟ್ಟು ಹೇಗೆ ಮಾಡುತ್ತಾರೆಂದು ನೋಡುತ್ತೇವೆ. ನನ್ನ ಕ್ಷೇತ್ರದ ಜನರು ನನಗೆ ನೀಡಿದ ಮತಕ್ಕೆ ಅವಮಾನ ಡಿಸಿ ಮಾಡುತ್ತಿದ್ದಾರೆ. ನಾನು ಡಿಸಿ ವಿರುದ್ಧ ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದು ಉಮಾನಾಥ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.