-->
ಮಂಕಿಪಾಕ್ಸ್ ಮಾರಕ ಕಾಯಿಲೆಯೇ: ಚಿಕನ್ ಪಾಕ್ಸ್‌ಗೂ ಮಂಕಿ ಪಾಕ್ಸ್‌ಗೂ ವ್ಯತ್ಯಾಸವೇನು?

ಮಂಕಿಪಾಕ್ಸ್ ಮಾರಕ ಕಾಯಿಲೆಯೇ: ಚಿಕನ್ ಪಾಕ್ಸ್‌ಗೂ ಮಂಕಿ ಪಾಕ್ಸ್‌ಗೂ ವ್ಯತ್ಯಾಸವೇನು?


ಮಂಗಳೂರು: ಆಫ್ರಿಕಾ‌ ದೇಶದಲ್ಲಿ ಆತಂಕ ಸೃಷ್ಟಿಸಿದ ಮಂಕಿಪಾಕ್ಸ್​ನ ಎರಡು ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಯುರೋಪ್ ಖಂಡದ ಸ್ವೀಡನ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಈಗಾಗಲೇ ಮಂಗನ ಕಾಯಿಲೆಗೆ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಿದೆ.


ಮಂಕಿ ಪಾಕ್ಸ್ ಎಂಬುದು ಮಂಗನಿಂದ ಹರಡುವ ಕಾಯಿಲೆ ಎಂಬ ತಪ್ಪು ಕಲ್ಪನೆಯಿದೆ. ಇದೊಂದು ವೈರಸ್​ನಿಂದ ಹರಡುವ ಕಾಯಿಲೆ. ಸಂಶೋಧನೆ ವೇಳೆ ಇದು ಮಂಗನಲ್ಲಿ‌ ಕಾಣಿಸಿಕೊಂಡ ಕಾರಣ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. ಈ ವೈರಸ್ ಉಳಿದ ಪ್ರಾಣಿಗಳಲ್ಲೂ ಕಂಡು ಬರುತ್ತದೆ. ಮಂಕಿಪಾಕ್ಸ್‌ಗೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ್ದರೆ ಮತ್ತು ಚರ್ಮರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆ ಚೇತರಿಸಿಕೊಳ್ಳಬಹುದು. ರಾಜ್ಯದಲ್ಲಿ ಈವರೆಗೆ ಒಂದೂ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿಲ್ಲ.


ಮಂಕಿ ಪಾಕ್ಸ್ ಕಾಯಿಲೆಯು ಚಿಕನ್ ಪಾಕ್ಸ್ ಖಾಯಿಲೆಯನ್ನು ಹೋಲುತ್ತದೆ. ಚಿಕನ್ ಪಾಕ್ಸ್ ಮತ್ತು ಮಂಕಿ ಪಾಕ್ಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಚಿಕನ್ ಪಾಕ್ಸ್​ನಲ್ಲಿ ಮೈಮೇಲೆ ಸಣ್ಣಗುಳ್ಳೆಗಳು ಕಾಣಿಸಿಕೊಂಡರೆ, ಮಂಕಿ‌ಪಾಕ್ಸ್​ನಲ್ಲಿ ಸ್ವಲ್ಪ ದೊಡ್ಡ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಚಿಕನ್ ಪಾಕ್ಸ್ ಸಣ್ಣಮಟ್ಟದಲ್ಲಿ ಹರಡಿದರೆ, ಮಂಕಿ‌ಪಾಕ್ಸ್ ದೊಡ್ಡಮಟ್ಟದಲ್ಲಿ ಹರಡುತ್ತದೆ. ಚಿಕನ್ ಪಾಕ್ಸ್​ನ ಕಲೆಗಳು ಕೆಲ‌ಸಮಯದ ಬಳಿಕ ಅಳಿಸಿಹೋದರೆ, ಮಂಕಿ ಪಾಕ್ಸ್​ ಕಲೆಗಳು ಮೈಮೇಲೆ ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆ ಹೆಚ್ಚಿದೆ.

ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮಂಕಿಪಾಕ್ಸ್‌ ಇರುವವರ ನಿಕಟ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವ ಮುನ್ನವೇ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಸಾಮಾನ್ಯವಾಗಿ ಈ ವೈರಲ್ ಸೋಂಕು ಗುದದ್ವಾರ, ಜನನಾಂಗ, ಎದೆ, ಮುಖ ಅಥವಾ ಬಾಯಿಯ ಮೇಲೆ ದದ್ದುಗಳಿಂದ ಪ್ರಾರಂಭವಾಗುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಬಹುದು. ದದ್ದುಗಳು ನೋವಿನಿಂದ ಕೂಡಿರುತ್ತವೆ. ತುರಿಕೆಯು ಹೆಚ್ಚಾಗಿರುತ್ತದೆ. ಈ ದದ್ದುಗಳು ಮೊಡವೆ ಅಥವಾ ಗುಳ್ಳೆಗಳನ್ನು ಹೋಲುತ್ತವೆ. ಜ್ವರ, ತಲೆನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಸ್ನಾಯು ನೋವು ಅಥವಾ ಶೀತ ಇತರ ರೋಗಲಕ್ಷಣಗಳಾಗಿವೆ. ಸುಮಾರು ನಾಲ್ಕು ವಾರಗಳವರೆಗೆ ಕಾಡುವ ಈ ಸೋಂಕು ಕೀವು ತುಂಬಿದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ.

ವೈರಸ್​ಗೆ ಒಡ್ಡಿಕೊಂಡ 21 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಆರಂಭವಾಗುತ್ತವೆ. ಗಾಯಗಳು ಸೋಂಕಿಗೆ ಒಳಗಾದಾಗ ಅಪಾಯಕಾರಿಯಾಗಬಹುದು. ಅತಿಸಾರ, ವಾಂತಿ, ನ್ಯುಮೋನಿಯಾ, ಮೆದುಳಿನ ಉರಿಯೂತ, ನಿರ್ಜಲೀಕರಣ, ಉಸಿರಾಟದ ತೊಂದರೆಗಳೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.

ರೋಗನಿರೋಧಕ ಶಕ್ತಿ ಹೊಂದಿಲ್ಲದವರು ಈ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಗರ್ಭಿಣಿಯರು, ಒಂದು ವರ್ಷದೊಳಗಿನ ಮಕ್ಕಳು, ಎಸ್ಟಿಮಾದಂತಹ ಕಾಯಿಲೆ ಹೊಂದಿರುವವರಿಗೆ ಇದರ ಅಪಾಯ ಅಧಿಕವಾಗಿರುತ್ತದೆ.

ಸೋಂಕಿತರು 2-4 ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸೋಂಕಿತರಿಂದ ದೂರವಿರುವುದು, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಅವರ ಕಾಳಜಿ ಮಾಡುವುದರಿಂದ ಸೋಂಕು ಹರಡುವ ಅಪಾಯ ಕಡಿಮೆ ಮಾಡಬಹುದು. ಸೋಂಕಿತರು ಮನೆಯಲ್ಲಿ ಇದ್ದರೆ ಆದಷ್ಟು ಸ್ವಚ್ಛತೆ ಪಾಲಿಸಬೇಕಾಗುತ್ತದೆ.

Ads on article

Advertise in articles 1

advertising articles 2

Advertise under the article