ಪತ್ನಿಯ ಬಿಕಿನಿ ಆಸೆ ಪೂರೈಸಲು ಖಾಸಗಿ ದ್ವೀಪವನ್ನೇ ಖರೀದಿಸಿದ ಪತಿರಾಯ : ಇದರ ಬೆಲೆ ಕೇಳಿದರೆ ನೀವು ಹುಬ್ಬೇರಿಸುವುದು ಖಂಡಿತಾ
Thursday, September 26, 2024
ದುಬೈ: ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಡೈವೋರ್ಸ್ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯ ಆಸೆಗಾಗಿ ನೂರಾರು ಕೋಟಿ ಹಣ ಸುರಿದು ದ್ವೀಪವನ್ನೇ ಖರೀದಿಸಿದ್ದಾನೆ. ಇದರ ಹಿಂದಿನ ಕಾರಣವೇನೆಂದು ತಿಳಿದರೆ ನೀವು ಹುಬ್ಬೇರಿಸುವುದು ಖಂಡಿತಾ.
ಸಾಮಾನ್ಯವಾಗಿ ಪತಿಯಂದಿರು ತಮ್ಮ ಪತ್ನಿಯನ್ನು ಖುಷಿಪಡಿಸಲು ಸಣ್ಣಸಣ್ಣ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಆದರೆ, ಈ ಮಿಲಿಯನೇರ್ ಪತಿಯೊಬ್ಬ ಪತ್ನಿಯ ಸಂತೋಷಕ್ಕಾಗಿ ದ್ವೀಪವನ್ನೇ ಖರೀದಿಸಿದ್ದಾನೆ. ಅದೂ ಬಿಕಿನಿ ಧರಿಸಿ ತನ್ನ ಪತ್ನಿ ಮುಜುಗರಕ್ಕೀಡಾಗಬಾರದು ಎಂಬ ಕಾರಣಕ್ಕೆ.
ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ಎಂಬವರು ತಮ್ಮ ಪತ್ನಿ ಸೌದಿ ಅಲ್ ನಡಾಕ್‌ಗಾಗಿ ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿದ್ದಾರೆ. ಅದಕ್ಕಾಗಿ ಅವರು 50 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿ ಪ್ರಕಾರ 418 ಕೋಟಿ ರೂ.) ಪಾವತಿಸಿದ್ದಾರೆ. ಈ ವಿಚಾರವನ್ನು ಜಮಾಲ್ ಅಲ್ ನಡಾಕ್ ಪತ್ನಿ ಸೌದಿ ಅಲ್ ನಡಾಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಅಲ್ಲದೆ, ಆ ದ್ವೀಪದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಬಿಕಿನಿ ಧರಿಸಿ ಹೊರಗೆ ಓಡಾಡಲು ನನಗೆ ಕಷ್ಟವಾದ ಕಾರಣ ನನ್ನ ಪತಿ ದ್ವೀಪವನ್ನು ಖರೀದಿಸಿದ್ದಾರೆ ಎಂದು ಸೌದಿ ಅಲ್ ನಡಾಕ್ ಹೇಳಿದ್ದಾರೆ. ನಾವಿಬ್ಬರೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಯೋಚಿಸಿದ್ದೆವು. ಆ ಸಂದರ್ಭ ನಾವು ನಮ್ಮ ಖಾಸಗಿತನದತ್ತ ಗಮನ ಹರಿಸಿದ್ದೆವು. ನಾನು ಸಮುದ್ರತೀರದಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯಬಹುದು ಎಂಬ ಕಾರಣಕ್ಕೆ ದ್ವೀಪವನ್ನು ಖರೀದಿಸುವ ಆಲೋಚನೆ ಹುಟ್ಟಿಕೊಂಡಿತು. ಇದೇ ನಮ್ಮ ಅತ್ಯುತ್ತಮ ಹೂಡಿಕೆಯಾಗಿದೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ. ಖಾಸಗಿತನ ಕಾರಣಕ್ಕೆ ಲೋಕೇಶನ್ ಅನ್ನು ಹೇಳಲಾಗದು ಎಂದು ಸೌದಿ ಅಲ್ ನಡಾಕ್ ಹೇಳಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇವಲ ಒಂದೇ ವಾರದಲ್ಲಿ 2.4 ಮಿಲಿಯನ್‌ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಕಿನಿ ಧರಿಸಲು ದ್ವೀಪವನ್ನೇ ಖರೀದಿಸಿರುವ ಸುದ್ದಿ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.