ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ ಉದ್ಘಾಟನೆ- ಗಣೇಶೋತ್ಸವ ಸಮಾಜ ಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿ: ಮುಲ್ಲೈ ಮುಗಿಲನ್

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ,  ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ಸೆ.7ರಿಂದ 9ರ ವರೆಗೆ ನಡೆಯುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನಾ ಸಮಾರಂಭ  ಜರಗಿತು.


ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಾರ್ಯಕ್ರಮ ಉದ್ಘಾಟಿಸಿ,  ಮಾತನಾಡಿ 115 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಕಳೆದ 18 ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ಇಲ್ಲಿನ ಗಣೇಶೋತ್ಸವ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು.


ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪ್ರಕೃತಿಗೆ ಹೆಚ್ಚಿನ ಮಹತ್ವ ನೀಡುವವರಾಗಿದ್ದು,  ಗಣೇಶೋತ್ಸವದ ಸಂದರ್ಭದಲ್ಲಿ ತೆನೆ ವಿತರಣೆ ಮಾಡುವ ಮೂಲಕ ದೇವರ ಆರಾಧನೆ ಜೊತೆಗೆ ಪ್ರಕೃತಿಯೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಿರುವುದು ಪ್ರಶಂಸನೀಯವಾಗಿದೆ ಎಂದರು. 


ಸಾಂಕೇತಿಕ ತೆನೆ ವಿತರಿಸಿದ ಮೋಹನ್ ದೇವ ಆಳ್ವ ಅವರು ಮಾತನಾಡಿ, ಅಜಿತ್ ಕುಮಾರ್ ರೈ ಮಾಲಾಡಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಗಣೇಶೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು. ಧ್ವಜಾರೋಹಣ ನೆರವೇರಿಸಿದ ಗ್ರೂಪ್ ಕ್ಯಾಪ್ಟನ್ ಪ್ರದೀಪ್ ಎಸ್. ಶೆಟ್ಟಿ ಅವರು ಸಂಘಟಕರನ್ನು ಅಭಿನಂದಿಸಿದರು.
ಅಶ್ವಿನಿ ಮಣಿ ಮುಲ್ಲೈ ಮುಗಿಲನ್,  ಡಾ. ಶೈಲಜಾ ಮೋಹನ್ ದೇವ್ ಆಳ್ವ ಹಾಗೂ ಜಯಂತಿ ಮೆನನ್ ಮುಖ್ಯ ಅತಿಥಿಗಳಾಗಿದ್ದರು.


ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ,  ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ,  ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ,  ರವಿರಾಜ್ ಶೆಟ್ಟಿ ನಿಟ್ಟೆಗುತ್ತು,  ಕೃಷ್ಣ ಪ್ರಸಾದ್ ರೈ,  ಗಣೇಶೋತ್ಸವ ಸಮಿತಿಯ ಸಂಚಾಲಕರುಗಳಾದ ದಿವಾಕರ ಸಾಮಾನಿ ಚೇಳಾರ್ ಗುತ್ತು,  ಅಶ್ವತ್ತಾಮ ಹೆಗ್ಡೆ,  ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಮೋಹನ್ ದೇವ ಆಳ್ವ ದಂಪತಿಗಳನ್ನು ಸನ್ಮಾನಿಸಲಾಯಿತು. 


ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು.  ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ ವಂದಿಸಿದರು.  ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಹಾಗೂ ಕವಿತಾ ಪಕ್ಕಳ  ಕಾರ್ಯಕ್ರಮ ನಿರೂಪಿಸಿದರು.