ಮಂಗಳೂರು: ಬಸ್ ಫುಟ್‌ಬೋರ್ಡ್‌‌ನಲ್ಲಿ ನೇತಾಡಿ ಕೈಜಾರಿ ಬಿದ್ದ ಶಾಲಾ ವಿದ್ಯಾರ್ಥಿ‌ - ವೀಡಿಯೋ ವೈರಲ್ ಬೆನ್ನಲ್ಲೇ ಚಾಲಕ, ನಿರ್ವಾಹಕನ ಮೇಲೆ ಕೇಸ್


ಮಂಗಳೂರು: ಫುಟ್‌ಬೋರ್ಡ್‌ ಭರ್ತಿ ನೇತಾಡುತ್ತ ಸಂಚರಿಸುತ್ತಿದ್ದ ಬಸ್‌ನಿಂದ ಶಾಲಾ ವಿದ್ಯಾರ್ಥಿಯೋರ್ವನು ಕೈಜಾರಿ ಬಿದ್ದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದಿದ್ದು, ಇದರ ವೀಡಿಯೋ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಬಸ್ ಚಾಲಕ, ನಿರ್ವಾಹಕನ ಮೇಲೆ ಕೇಸ್ ದಾಖಲಿಸಿದ್ದಾರೆ.

ತಲಪಾಡಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ರೂಟ್ ನಂಬರ್ 42 ಸೈಂಟ್ ಆ್ಯಂಟನಿ ಬಸ್‌‌ನಲ್ಲಿ ಬುಧವಾರ ಬೆಳಗ್ಗೆ 8.25ಕ್ಕೆ ಈ ಘಟನೆ ನಡೆದಿದೆ. ಬಸ್ ಭರ್ತಿ ಪ್ರಯಾಣಿಕರು ತುಂಬಿ, ಎರಡೂ ಫುಟ್‌ಬೋರ್ಡ್‌ನಲ್ಲೂ ಭರ್ತಿ ಶಾಲಾ ವಿದ್ಯಾರ್ಥಿಗಳು ನೇತಾಡಿ ಸಂಚರಿಸುತ್ತಿದ್ದರು.‌ ಇದನ್ನು ಹಿಂಭಾಗದಿಂದ ಬರುತ್ತಿದ್ದ ವಾಹನದಲ್ಲಿದ್ದವರು ವೀಡಿಯೋ ಮಾಡಿ ಮುಸ್ಲಿಂ ಭಾಷೆಯಲ್ಲಿ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿರುವ ಬಗ್ಗೆ ಹೇಳುತ್ತಾ ಬರುತ್ತಿದ್ದರು‌.

ಸೈಂಟ್ ಆ್ಯಂಟನಿ ಬಸ್ ಇನ್ನೇನು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಬಸ್ ಅನ್ನು ನಿಲ್ಲಿಸಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಲ್ಲಿ ನೇತಾಡಿಕೊಂಡು ಬರುತ್ತಿದ್ದ ವಿದ್ಯಾರ್ಥಿ ರಸ್ತೆಯ ಬದಿಗೆ ಬಿದ್ದಿದ್ದು ಆದರೆ ಆತನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಆದ್ದರಿಂದ ಬಸ್ ಚಾಲಕ ಮಹಮ್ಮದ್ ಫಯಾಝ್ ಮತ್ತು ನಿರ್ವಾಹಕ ಮನೀಶ್ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹಾಗೂ ಪುಟ್‌ಬೋರ್ಡ್‌ನಲ್ಲಿ ಜನರನ್ನು ನೇತಾಡಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿರುವ ಬಗ್ಗೆ ಜಪ್ಪಿನಮೊಗರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.