ಯುಪಿಎಸ್‌ಸಿ ಅಧ್ಯಕ್ಷರಾಗಿ ಪ್ರೀತಿ ಸೂದನ್ ನೇಮಕ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಪ್ರೀತಿ ಸೂದನ್ ಅವರನ್ನು ನೇಮಕ ಮಾಡಲಾಗಿದೆ. 

ಸದ್ಯ ಯುಪಿಎಸ್‌ಸಿ ಸದಸ್ಯೆಯಾಗಿರುವ ಪ್ರೀತಿ ಸೂದನ್ ಅವರು, ಗುರುವಾರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಲಿದ್ದಾರೆ.

ಆಗಸ್ಟ್ 1ರಿಂದ, ಮುಂದಿನ ಆದೇಶದವರೆಗೆ ಅಥವಾ 2025ರ ಎಪ್ರಿಲ್ 29ವರೆಗೆ ಪ್ರೀತಿ ಸೂದನ್ ಯುಪಿಎಸ್‌ಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಂಧ್ರಪ್ರದೇಶ ಕೇಡರ್‌ನ 1983ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪ್ರೀತಿ ಸೂದನ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಮನೋಜ್ ಸೋನಿ ಜುಲೈ 4ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಆ ಸ್ಥಾನ ತೆರವಾಗಿತ್ತು. ಇದೀಗ ಆ ಸ್ಥಾನವನ್ನು ಪ್ರೀತಿ ಸೂದನ್ ಅಲಂಕರಿಸಲಿದ್ದಾರೆ.