ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇರ್ ಸೆಂಟರ್ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್


ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್ ಗಳನ್ನ ಮುಂಬರುವ ಒಂದು ತಿಂಗಳ ಒಳಗಾಗಿ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 150 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ‌ಪೂಜೆ ನೆರವೇರಿಸಿದರು.‌

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಕೆ.ಸಿ ಜನರಲ್ ಆಸ್ಪತ್ರೆಯನ್ನ ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಭೋದಕ ಕೊಠಡಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿಯ ಅನುದಾನವನ್ನ ಕೇಳಿದ್ದೆವು.  ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಭೂಮಿ ಪೂಜೆ ಕೂಡಾ ನೆರವೇರಿಸಲಾಗಿದೆ. ಇದರ ಸಂಪೂರ್ಣ ಸದುಪಯೋಗ ನಮ್ಮ ಜನಸಾಮಾನ್ಯರಿಗೆ ದೊರೆಯಲಿದೆ ಎಂದರು.‌

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಡಯಾಲಿಸಿಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, 750 ಕ್ಕೂ ಹೆಚ್ಚು ಏಕಬಳಕೆಯ ಡಯಾಲಿಸಿಸ್ ಹೊಸ ಯಂತ್ರಗಳನ್ನ ಅಳವಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಶೇ 30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿಗಳು ಸರಬರಾಜು ಆಗುತ್ತಿದ್ದವು. ಇದೀಗ ಶೇ 70 ರಷ್ಟು ಔಷಧಿಗಳನ್ನ ನಿಗಮದಿಂದ ಖರೀಧಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಮುಂಬರವ ಕೆಲವೇ ದಿನಗಳಲ್ಲಿ ಶೇ 90 ರಷ್ಟು ಔಷಧಿಗಳು ದೊರಕಿಸುವತ್ತ ಆರೋಗ್ಯ ಇಲಾಖೆ ಹೆಜ್ಜೆಯಿಟ್ಟಿದೆ ಎಂದರು. 

ಕ್ಯಾನ್ಸರ್ ರೋಗಿಗಳು ಕಿಮೋಥೆರಪಿಗಾಗಿ ಇಂದು ದೂರದ ನಗರಪ್ರದೇಶದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಗಳಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ ಕೇರ್ ಸೆಂಟರ್ ಗಳನ್ನ ತೆರೆಯಲಾಗುವುದು. ಮುಂಬರುವ ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

*ಅಪಘಾತ ಸಂಭವಿಸುವ ಹಾಟ್ ಸ್ಪಾಟ್ ಗಳಲ್ಲಿ ಪ್ರತ್ಯೇಕ ಅಂಬ್ಯುಲೆನ್ಸ್* 

ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.‌ 65 ನೂತನ ಪ್ರತ್ಯೇಕ ಅಂಬ್ಯುಲೆನ್ಸ್ ಸೇವೆಯನ್ನ ಅಪಘಾತಕ್ಕಿಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. 

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಆರೋಗ್ಯ ಸೇವೆಗಳನ್ನ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳು ಹಿಂದೆಬೀಳಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ವೈದ್ಯರುಗಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ಹೊಲಿಸಿದರೆ ಹೆಚ್ಚು ಅನುಭವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಹೈಟೆಕ್ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವಂತಾಗಬೇಕು. ಆಧುನಿಕ ಯುಗದಲ್ಲಿ ರೋಬೆಟಿಕ್ ಸರ್ಜರಿಗಳನ್ನ ನಡೆಸಲಾಗುತ್ತಿದೆ. ರೋಬೆಟಿಕ್ ಸರ್ಜರಿಯಂತಹ ಆರೋಗ್ಯ ಸೇವೆಗಳು  ಸರ್ಕಾರಿ ಆಸ್ಪತ್ರೆಯಲ್ಲೂ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಆರೋಗ್ಯ ಸಚಿವರಾಗಿ ದಿನೇಶ್ ಗುಂಡೂರಾವ್ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನ ತರುತ್ತಿದ್ದು, ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನ ಅನುಷ್ಠಾನಗೊಳಿಸುತ್ತಿದೆ. ಜನಸಾಮಾನ್ಯರ ಆರೋಗ್ಯ ಸೇವೆಗಳನ್ನ ಒದಗಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು. 

150.00 ಕೋಟಿ ಕಾಮಗಾರಿಗಳ ವಿವರ

200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ. ಅಂದಾಜು ಮೊತ್ತ :- ರೂ 66.78 ಕೋಟಿಗಳು
 ಕಟ್ಟಡದ ಒಟ್ಟು ವಿಸ್ತೀರ್ಣ :- 12824 ಚ.ಮೀ

ಭೋದಕ ವಿಭಾಗ ಕಟ್ಟಡ
ಅಂದಾಜು ಮೊತ್ತ :- ರೂ.38.28 ಕೋಟಿಗಳು
ಕಟ್ಟಡದ ಒಟ್ಟು ವಿಸ್ತೀರ್ಣ :- 8810 ಚ.ಮೀ

ಶವಾಗಾರ ಕೊಠಡಿ
ಅಂದಾಜು ಮೊತ್ತ :- ರೂ.4.28 ಕೋಟಿಗಳು •
ಕಟ್ಟಡದ ಒಟ್ಟು ವಿಸ್ತೀರ್ಣ :- 790 ಚ.ಮೀ

ಅಡುಗೆಮನೆ ಕಟ್ಟಡ : ಅಂದಾಜು ಮೊತ್ತ :- ರೂ. 1.77 ಕೋಟಿಗಳು (ಸಲಕರಣೆಗಳು ಸೇರಿದಂತೆ)

ಲಾಂಡ್ರಿ ಕಟ್ಟಡ : ಅಂದಾಜು ಮೊತ್ತ :- ರೂ.1.98 ಕೋಟಿಗಳು (ಸಲಕರಣೆಗಳು ಸೇರಿದಂತೆ)

ಜೈವಿಕ ವೈದ್ಯಕೀಯ ತ್ಯಾಜ್ಯದ ಕೊಠಡಿ : ಅಂದಾಜು ಮೊತ್ತ :- ರೂ.0.38 ಕೋಟಿಗಳು

ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು : ಅಂದಾಜು ಮೊತ್ತ  ರೂ.20 ಕೋಟಿಗಳು.