ಮಂಗಳೂರು: ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಗಾಯ


ಮಂಗಳೂರು: ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆ ಸೋಮವಾರ ಸಂಜೆ ಮಾರಾಮಾರಿ ನಡೆದಿದ್ದು, ಇಬ್ಬರು ವಿಚಾರಣಾಧೀನ ಕೈದಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(33) ಹಾಗೂ ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (30) ಗಾಯಾಳುಗಳು. ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34), ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್, ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಹಲ್ಲೆಗೈದ ಆರೋಪಿಗಳು

ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಈ ಇಬ್ಬರ ಮೇಲೆ ರೌಡಿಶೀಟರ್‌ ಟೋಪಿ ನೌಫಲ್ ಮತ್ತು ಗ್ಯಾಂಗ್‌ನಿಂದ ದಾಳಿಯಾಗಿದೆ. ಸಂಜೆ 6:30ರಿಂದ 6:45ರ ನಡುವೆ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳು ಅಡುಗೆ ಮನೆಯಲ್ಲಿದ್ದ ಕೆಲವು ಹರಿತವಾದ ವಸ್ತುಗಳಿಂದ ಹಲ್ಲೆಗೈದಿದ್ದಾರೆ. ಪರಿಣಾಮ ಅವರ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿರುವ ಮಾಹಿತಿಯಿದೆ‌. ಸದ್ಯ ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.

ಆರೋಪಿಗಳು ಮತ್ತು ಹಲ್ಲೆಗೊಳಗಾದ ಇಬ್ಬರೂ ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅಲ್ಲದೇ ರೌಡಿ ಶೀಟರ್ ಗಳಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.