-->

40 ದಿನಗಳಲ್ಲಿ ಏಳು ಬಾರಿ ಹಾವು ಯುವಕನಿಗೆ ಕಚ್ಚಿದ್ದೇಕೆ?: ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

40 ದಿನಗಳಲ್ಲಿ ಏಳು ಬಾರಿ ಹಾವು ಯುವಕನಿಗೆ ಕಚ್ಚಿದ್ದೇಕೆ?: ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

ಲಖನೌ: ಯುವಕನೋರ್ವನಿಗೆ 40 ದಿನಗಳಲ್ಲಿ ಬರೋಬ್ಬರಿ ಏಳು ಬಾರಿ ಹಾವು ಕಡಿದಿರುವ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಉತ್ತರ ಪ್ರದೇಶದ ಫತೇಪು‌ರ್ ಜಿಲ್ಲೆಯ ಸೌರಾ ಗ್ರಾಮದ ವಿಕಾಸ್ ದ್ವಿವೇದಿ(24) ಎಂಬ ಯುವಕನಿಗೆ ಕಳೆದ ಒಂದೂವರೆ ತಿಂಗಳಲ್ಲಿ ಅದರಲ್ಲೂ ಪ್ರತಿ ಶನಿವಾರವೇ ಏಳು ಬಾರಿ ಹಾವು ಕಚ್ಚಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣದ ಅಸಲಿ ಕಾರಣ ಹೊರಬಿದ್ದಿದೆ.

ತನಗೆ ಏಳು ಬಾರಿ ಹಾವು ಕಚ್ಚಿದೆ ಎಂದು ಯುವಕ ಹೇಳುತ್ತಿರುವುದು ಸುಳ್ಳು. ಅಷ್ಟೊಂದು ಬಾರಿ ಆತನಿಗೆ ಹಾವು ಕಚ್ಚಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ. ಯುವಕನಿಗೆ ಒಂದು ಬಾರಿ ಮಾತ್ರ ಹಾವು ಕಚ್ಚಿದೆ. ಆದರೆ ಆ ಬಳಿಕವೂ ಆತ ಹಾವಿನ ಭಯದಲ್ಲಿದ್ದ ಕಾರಣ ಪದೇಪದೆ ಹಾವು ಕಚ್ಚಿದ ಅನುಭವವಾಗಿದೆ. ಯುವಕನಿಗೆ ಒಫಿಡಿಯೋಫೋಬಿಯಾ (ಹಾವುಗಳ ಅತಿಯಾದ ಭಯ) ರೋಗವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ವಿಕಾಸ್, ಶನಿವಾರ ಮಾತ್ರ ಹಾವು ಕಡಿಯುತ್ತದೆ ಎಂದು ತಜ್ಞರ ಸಮಿತಿ ಮುಂದೆ ಹೇಳಿದ್ದನು.

ಜೂನ್ 2ರಂದು ಸಂಜೆ, ವಿಕಾಸ್‌ಗೆ ಮೊದಲ ಬಾರಿ ಹಾವು ಕಚ್ಚಿದೆ. ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು ವಿಕಾಸ್‌ಗೆ ಚಿಕಿತ್ಸೆ ನೀಡಲಾಗಿತ್ತು. ಶೀಘ್ರವೇ ಅವರು ಗುಣಮುಖರಾಗಿ ಮನೆಗೆ ಮರಳಿದ್ದರು. ಆದರೆ ಆ ಬಳಿಕದಿಂದ ಜುಲೈ 6ರವರೆಗೆ ಯುವಕನಿಗೆ ಇನ್ನೂ ಐದು ಬಾರಿ ಹಾವು ಕಚ್ಚಿದ ಅನುಭವವಾಗಿದೆ.

ನಾಲ್ಕನೇ ಬಾರಿ ಹಾವು ಕಚ್ಚಿದ ಅನುಭವವಾದಾಗ ಮನೆ ಬಿಟ್ಟು ಬೇರೆಡೆ ವಾಸಿಸುವಂತೆ ವಿಕಾಸ್‌ಗೆ ಸೂಚಿಸಲಾಗಿತ್ತು. ಆದ್ದರಿಂದ ಆತ ರಾಧಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದ‌. ಆದರೆ ವಿಕಾಸ್‌ಗೆ ಐದನೇ ಬಾರಿ ಹಾವು ಕಚ್ಚಿದ ಅನುಭವವಾಗಿದೆ. ಇದರಿಂದ ಹೆದರಿದ ಪಾಲಕರು ಆತನನ್ನು ಮನೆಗೆ ಕರೆತಂದರು. ಇದಾದ ಬಳಿಕವೂ ಮತ್ತೆ ಎರಡು ಬಾರಿ ಹಾವು ಕಚ್ಚಿದ ಅನುಭವ ವಿಕಾಸ್‌ಗೆ ಆಗಿದೆ.

ಮಗನ ಚಿಕಿತ್ಸೆಗಾಗಿ ಕುಟುಂಬಸ್ಥರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆರ್ಥಿಕ ನೆರವು ಕೋರಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಅಸಾಮಾನ್ಯ ಎಂದು ಬಣ್ಣಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್, ವೈದ್ಯರು, ಅರಣ್ಯ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದರು ಮತ್ತು ತನಿಖೆಗೆ ಆದೇಶಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿದ ಸಮಿತಿಯು ಯುವಕನಿಗೆ ಒಫಿಡಿಯೋಫೋಬಿಯಾ ಕಾಯಿಲೆ ಎಂದು ಕಂಡುಹಿಡಿದಿದೆ. ಅಂದರೆ, ಹಾವುಗಳೆಂದರೆ ಯುವಕನಿಗೆ ಭಯ. ಹೀಗಾಗಿ ಒಮ್ಮೆ ಕಚ್ಚಿದ್ದಕ್ಕೆ ಮತ್ತೆ ಮತ್ತೆ ಅದೇ ಅನುಭವ ಆತನಿಗಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿದುಬಂದಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article