ಫ್ರಾಂಕ್ ರೀಲ್ಸ್ ಮಾಡಲು ಹೋಗಿ ನೇಣು ಬಿಗಿದು ಮೃತಪಟ್ಟ 11ವರ್ಷದ ಬಾಲಕ
Monday, July 22, 2024
ಮೊರೇನಾ (ಮಧ್ಯಪ್ರದೇಶ): ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲೆಂದು ಕತ್ತಿಗೆ ನೇಣು ಬಿಗಿಯುವ ಪ್ರಾಂಕ್ ವೀಡಿಯೋ ಮಾಡಲು ಹೋಗಿ 11 ವರ್ಷದ ಬಾಲಕನೊಬ್ಬ ಅದೇ ಉರುಳಿಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ ಅಂಬಾಪಟ್ಟಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರವಿ ಭಡೋರಿಯ ತಿಳಿಸಿದ್ದಾರೆ.
ಕರಣ್ ಎಂಬ ಬಾಲಕ ಮರದಲ್ಲಿ ನೇತಾಡುತ್ತಿದ್ದ ಹಗ್ಗವನ್ನು ತನ್ನ ಕತ್ತಿನ ಸುತ್ತ ಸುತ್ತಿಕೊಂಡಿದ್ದಾನೆ. ಬಳಿಕ, ಅದರಿಂದ ನೋವಿಗೊಳಗಾಗುತ್ತಿರುವಂತೆ ನಟಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಸುತ್ತಲಿನ ಹುಡುಗರು ಆಟ ಆಡುವುದನ್ನು ಮುಂದುವರಿಸಿರುವುದು ಕಂಡು ಬಂದಿದೆ. ಕರಣ್ ನಟನೆ ಮಾಡುತ್ತಿದ್ದಾನೆ ಎಂದು ಜೊತೆಯಲ್ಲಿನ ಹುಡುಗರು ಭಾವಿಸಿದ್ದಾರೆ. ಆದರೆ, ಆತ ಕೆಲವೇ ಕ್ಷಣಗಳಲ್ಲಿ ಪ್ರಜ್ಞಾಹೀನನಾಗಿದ್ದಾನೆ ಎಂದು ಹೇಳಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕರಣ್ ಪೋಷಕರು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರವಿ ಭಡೋರಿಯ ತಿಳಿಸಿದ್ದಾರೆ.