UPPINANGADY: ಆತ್ಮಹತ್ಯೆಗೆ ಮುಂದಾದ ಮಹಿಳೆಯ ರಕ್ಷಣೆ- ಸಾಕಿದ ಮನೆಯಾಕೆಯ ಆತ್ಮಹತ್ಯೆ ತಡೆಯಲು ಯತ್ನಿಸಿದ ನಾಯಿ!

 


 

AI PHOTO

ಮಂಗಳೂರು: ಪತಿಯೊಂದಿಗೆ ಜಗಳವಾಡಿ ಬೇಸರಗೊಂಡ ಮಹಿಳೆ ಆತ್ಮಹತ್ಯೆ ಮಾಡಲೆಂದು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲೆತ್ನಿಸಿದಾಗ ಸ್ಥಳೀಯ ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ರಕ್ಷಿಸಲಟ್ಟ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.

 

ಹದಿನಾರು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ನಡುವೆ ವಿರಸ ಮೂಡಿದ್ದು, ಗುರುವಾರ ರಾತ್ರಿ ಗಂಡ ಹೆಂಡತಿಯ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಇದರಿಂದ ಬೇಸರಗೊಂಡ ಆಕೆ ಮನೆಯಿಂದ ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ನಡೆದುಕೊಂಡೇ ಬಂದು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲು ಸೇತುವೆ ಮೇಲೆ ಕುಳಿತಿದ್ದರು. ಸಂಶಯಗೊಂಡ ಬೈಕ್ ಸವಾರರೊಬ್ಬರು ಬಗ್ಗೆ ಸ್ಥಳೀಯ ಸಾಮಾಜಿಕ ಮುಂದಾಳು ಯು.ಟಿ. ಫಯಾಜ್ ರವರಲ್ಲಿ ವಿಷಯ ತಿಳಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಯು.ಟಿ. ಫಯಾಜ್ ಸೇತುವೆಯ ದಂಡೆಯಲ್ಲಿ ಕುಳಿತು ಇನ್ನೇನು ಹಾರಬೇಕೆನ್ನುವಂತಿದ್ದ ಮಹಿಳೆಯನ್ನು ಕ್ಷಿಪ್ರಗತಿಯಿಂದ ಎಳೆದು ರಕ್ಷಿಸಿದರು. ಬಳಿಕ ಸಮೀಪದ ಮನೆಗೆ ಕರೆದೊಯ್ದು ಸಂತೈಸಿ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೊಪ್ಪಿಸಿದರು.

 

ಸಾಕಿದ ಮನೆಯಾಕೆಯ ಆತ್ಮಹತ್ಯೆ ತಡೆಯಲು ಯತ್ನಿಸಿದ ನಾಯಿ!

ಪತಿಯೊಂದಿಗೆ ಮುನಿಸಿಕೊಂಡು ಮನೆಯಿಂದ ರಾತ್ರಿ ನಡೆದುಕೊಂಡ ಬಂದ ಮಹಿಳೆಯನ್ನು ಸಾಕು ನಾಯಿ ಹಿಂಬಾಲಿಸಿಕೊಂಡು ಬಂದಿದೆ. ಸೇತುವೆ ದಂಡೆಯಲ್ಲಿನದಿ ದಡದಲ್ಲಿ ಕುಳಿತಿದ್ದಾಗ ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದೆಳೆಯುತ್ತಿತ್ತು. ಮಾತ್ರವಲ್ಲದೆ ಬೊಗಳುತ್ತ ತನ್ನದೇ ಭಾಷೆಯಲ್ಲಿ ಆಕೆಯನ್ನು ಸಂತೈಸುತ್ತಿತ್ತು. ನಾಯಿಯ ಚಡಪಡಿಸುವಿಕೆ ಹಾಗೂ ಮಹಿಳೆಯ ಉಡುಪು ಕಚ್ಚಿ ಎಳೆಯುತ್ತಿದ್ದನ್ನು ಕಂಡ ಬೈಕ್ ಸವಾರ ಸಂಶಯಗೊಂಡು ಫಯಾಜ್ ಅವರಿಗೆ ವಿಷಯ ತಿಳಿಸಿದ್ದರಿಂದ ಅಹಿತಕರ ಘಟನೆಯೊಂದು ತಪ್ಪಿತು.

 

ದಂಪತಿಗೆ ಇಬ್ಬರು ಮಕ್ಕಳಿದ್ದರೂ ಕ್ಷುಲ್ಲಕ ವಿಚಾರಕ್ಕೆ ತಪ್ಪು ನಿರ್ಧಾರ ತೆಗೆದುಕೊಂಡು ಜೀವ ಕಳೆದುಕೊಳ್ಳುತ್ತಿದ್ದ ಮಹಿಳೆಗೆ ಪೊಲೀಸರು ಬುದ್ದಿಮಾತು ಹೇಳಿದ್ದಾರೆ. ಶುಕ್ರವಾರದಂದು ಪತಿ - ಪತ್ನಿಯನ್ನು ಕರೆಯಿಸಿ ಪೊಲೀಸರು ಕೌನ್ಸಿಲಿಂಗ್ನಡೆಸಿದ್ದಾರೆ. ಮಕ್ಕಳಿಬ್ಬರು ತಂದೆಯೊಂದಿಗೆ ಇರಲು ಇಚ್ಛಿಸಿದರೆ, ಮಹಿಳೆ ತನ್ನ ತಾಯಿಯ ಜೊತೆ ಹೋಗುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.