ಆರೋಗ್ಯ ವಿಮಾ ಕ್ಷೇತ್ರಕ್ಕೆ LIC : ಮೂರು ತಿಂಗಳಲ್ಲಿ ಪರವಾನಿಗೆ ಸಾಧ್ಯತೆ



ಹೊಸದಿಲ್ಲಿ:  ಎಲ್ಐಸಿ ಆರೋಗ್ಯ ವಿಮಾ ಕ್ಷೇತ್ರ ( HEALTH INSURANCE) ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಅದಕ್ಕಾಗಿ ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಐದು ಅಗ್ರ ಕಂಪೆನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ. 


ಈ ಉದ್ದೇಶಕ್ಕಾಗಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಕ್ಕೆ ತಾನು ಜಾರಿಗೊಳಿಸಲಿರುವ ಉದ್ದೇಶಿತ ಆರೋಗ್ಯ ವಿಮೆಯ ಯೋಜನೆಯ ವಿವರಗಳನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.


ಪರವಾನಿಗೆ ಪಡೆಯಲು ಇನ್ನೂ 3 ತಿಂಗಳು ಬೇಕಾಗಬಹುದು. ಆ ಅವಧಿಯಲ್ಲಿ ದೇಶದಲ್ಲಿ ಸದ್ಯ ಕಾರ್ಯ ವೆಸಗುತ್ತಿರುವ ಖಾಸಗಿ ಕ್ಷೇತ್ರದ ಆರೋಗ್ಯ ವಿಮೆ ನೀಡುವ ಕಂಪೆನಿಗಳ ಪೈಕಿ ಒಂದನ್ನು ಖರೀದಿ ಮಾಡುವ ಬಗ್ಗೆ LIC ಚಿಂತನೆ ನಡೆಸಲಿದೆ ಎನ್ನಲಾಗಿದೆ.


ಈ ನಿಟ್ಟಿನಲ್ಲಿ ಆಂತರಿಕವಾಗಿ ಹಲವು ಕೆಲಸಗಳು ನಡೆದಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಸದ್ಯ 29 ಕಂಪೆನಿಗಳು ಆರೋಗ್ಯ ವಿಮೆ ನೀಡುವ ಕಂಪೆನಿಗಳು ಇವೆ. ಎಲ್ಐಸಿ ಯು ಒಟ್ಟು 52,000 ಕೋ. ರೂ. ಮೌಲ್ಯದ ಆಸ್ತಿ ಹೊಂದಿದೆ.