ಮಂಗಳೂರು: ಮನೆಮೇಲೆಯೇ ತಡೆಗೋಡೆ ಕುಸಿದು ದಂಪತಿ ಸಹಿತ ಮಕ್ಕಳಿಬ್ಬರು ದುರ್ಮರಣ

ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿನಗರ ಎಂಬಲ್ಲಿ ತಡೆಗೋಡೆಯೊಂದು ಮನೆ ಮೇಲೆಯೇ ಕುಸಿದು ಬಿದ್ದು ದಂಪತಿ ಸಹಿತ ಮಕ್ಕಳಿಬ್ಬರು ಸಾವನ್ನಪ್ಪಿರುವ ದುರಂತವೊಂದು ನಡೆದಿದೆ.


ಮದನಿ ನಗರ ನಿವಾಸಿ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತಪಟ್ಟ ದುರ್ದೈವಿಗಳು.


ಅಬೂಬಕ್ಕರ್ ಎಂಬವರಿಗೆ ಸೇರಿದ ಆವರಣಗೋಡೆ ಬುಧವಾರ ಬೆಳಗ್ಗೆ ಏಕಾಏಕಿ ಕುಸಿದು ಯಾಸಿರ್ ಅವರ ಮನೆಯ ಮೇಲೆಯೇ ಬಿದ್ದಿದೆ‌. ಪರಿಣಾಮ ಇವರ ಮನೆಗೋಡೆ ಕುಸಿದು ದಂಪತಿ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿದ್ದರು. ಆದರೆ ರಕ್ಷಣೆ ಮಾಡುವ ಮೊದಲೇ ಮನೆಯೊಳಗಿದ್ದ ನಾಲ್ವರೂ ಇಹಲೋಕ ತ್ಯಜಿಸಿದ್ದಾರೆ ಈಗಾಗಲೇ ಮೂವರ ಮೃತದೇಹ ಹೊರತೆಗೆಯಲಾಗಿದೆ. ಓರ್ವ ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.