ಮಂಗಳೂರು: ಮೋದಿ ಮೂರನೇ ಬಾರಿಗೆ ಪ್ರಧಾನಿ - ವಿಜಯೋತ್ಸವದ ಬಳಿಕ ಇಬ್ಬರಿಗೆ ಚೂರಿ ಇರಿತ
Monday, June 10, 2024
ಮಂಗಳೂರು : ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಕೈಗೊಂಡ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದ ಬಳಿಕ 20-25 ಮಂದಿಯ ತಂಡವೊಂದು ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆ ನಗರದ ಮುಡಿಪು ಸಮೀಪದ ಬೋಳಿಯಾರು ಎಂಬಲ್ಲಿ ನಡೆದಿದೆ.
ಇನ್ನೋಳಿ ನಿವಾಸಿಗಳಾದ ಹರೀಶ್ (41), ನಂದಕುಮಾರ್ (24 ವರ್ಷ) ಚೂರಿ ಇರಿತಗೊಂಡವರು. ಇನ್ನೋಳಿ ನಿವಾಸಿ ಕೃಷ್ಣ ಕುಮಾರ್ ಎಂಬವರು ಹಲ್ಲೆಗೊಳಗಾಗಿದ್ದಾರೆ.
ಮೋದಿಯವರು ರವಿವಾರ ಪ್ರಧಾನಿಯಾಗಿ ಮೂರನೇ ಬಾರಿ ಪದಗ್ರಹಣಗೈದಿದ್ದರು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಬೋಳಿಯಾರುವಿನಲ್ಲಿ ವಿಜಯೋತ್ಸವ ನಡೆದಿತ್ತು. ಈ ವೇಳೆ ಮೂವರು ಬಿಜೆಪಿ ಕಾರ್ಯಕರ್ತರು ಬೊಳಿಯಾರು ಮಸೀದಿಯ ಮುಂಭಾಗ ಘೋಷಣೆಗಳನ್ನು ಕೂಗಿದ್ದರು ಎನ್ನಲಾಗಿದೆ.
ವಿಜಯೋತ್ಸವದ ಬಳಿಕ ಕೆಲ ಬೈಕ್‌ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿದೆ. ಅವರು ಮಸೀದಿಯಿಂದ 2 ಕಿ.ಮೀ. ಮುಂಭಾಗ ಬಾರ್ ಮುಂದೆ ನಿಂತಿದ್ದರು. ಆಗ ಅವರನ್ನು ಹಿಂಬಾಲಿಸಿಕೊಂಡು ಬಂದ ಮುಸ್ಲಿಂ ಯುವಕರು ಬಾರ್ ಬಳಿಗೆ ಬಂದಿದ್ದಾರೆ. ಈ ವೇಳೆ ಎರಡೂ ತಂಡಗಳ ನಡುವೆ ವಾಗ್ವಾದ ನಡೆದಿದೆ. ಅಲ್ಲಿ ಮುಸ್ಲಿಂ ಯುವಕರ ತಂಡ ಮೂವರನ್ನು ಥಳಿಸಿ, ಇಬ್ಬರಿಗೆ ಚೂರಿಯಿಂದ ಇರಿದಿದೆ. ಇವರಲ್ಲಿ ಒಬ್ಬರು ಅಪಾಯದಿಂದ ಪಾರಾಗಿದ್ದು, ಮತ್ತೊಬ್ಬರು ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.