-->
1000938341
ತಮಿಳುನಾಡು ಕಳ್ಳಭಟ್ಟಿ ದುರಂತ:  50 ಮಂದಿ ಸಾವು

ತಮಿಳುನಾಡು ಕಳ್ಳಭಟ್ಟಿ ದುರಂತ: 50 ಮಂದಿ ಸಾವು
ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕಳ್ಳಭಟ್ಟಿ ದುರಂತದಿಂದ ಮೃತರ ಸಂಖ್ಯೆ 50ಕ್ಕೇ ಏರಿಕೆಯಾಗಿದೆ. ಕನಿಷ್ಠ 100 ಜನರು ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 


ಕಳೆದ 3 ದಿನಗಳ ಹಿಂದೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅನೇಕರು ನಕಲಿ ಮದ್ಯವನ್ನು ಸೇವಿಸಿದ್ದರು. ನಂತರ ನಿರಂತರವಾಗಿ ಸಾವಿನ ಕುರಿತು ವರದಿಗಳು ಬರುತ್ತಿದೆ. ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಇಂದು ಮತ್ತೆ ಎಂಟು ಜನರು ಮೃತಪಟ್ಟಿದ್ದಾರೆ.ಕಳೆದ ವರ್ಷ ಸಹ ವಿಲ್ಲುಪುರಂ ಜಿಲ್ಲೆಯಲ್ಲಿ  2 ಕಳ್ಳಭಟ್ಟಿ ದುರಂತಗಳು ಸಂಭವಿಸಿದ್ದವು. ಇದರಿಂದ ಒಟ್ಟಾರೆ 22 ಜನರು ಸಾವಿಗೀಡಾಗಿದ್ದರು. ಈಗ ಕೇವಲ 1 ವರ್ಷದೊಳಗೆ ಮತ್ತೊಂದು ದುರಂತ ಘಟಿಸಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ ಅಕ್ರಮ ಮದ್ಯದ ತಯಾರಿಕೆ ಮತ್ತು ಮಾರಾಟ ತಡೆಯಲು ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿದೆ.
 ದುರಂತದಿಂದಾಗಿ ಕಲ್ಲಕುರಿಚಿ ಟೌನ್ ಬಸ್ ನಿಲ್ದಾಣದಿಂದ ಕೇವಲ ಕೂಗಳತೆಯ ದೂರದಲ್ಲಿರುವ ಕರುಣಾಪುರದಲ್ಲಿ ಸೂತಕದ ಛಾಯೆಯು ಆವರಿಸಿದೆ. ಈ  ಮೃತರಲ್ಲಿ ಬಹುತೇಕರು ಬಡವರು, ಕಾರ್ಮಿಕರೇ ಆಗಿದ್ದಾರೆ. ಸಂತ್ರಸ್ತರ ಮನೆಗಳು ಮಾತ್ರವಲ್ಲದೇ, ಅವರು ದಾಖಲಾದ ಆಸ್ಪತ್ರೆಗಳಲ್ಲೂ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿವೆ. ಸಂತ್ರಸ್ತ ಕರುಣಾಪುರದ ರಾಮಕೃಷ್ಣನ್ ಎಂಬವರ ಪತ್ನಿ ಆಸ್ಪತ್ರೆಗೆ ಮಧ್ಯರಾತ್ರಿ ಕಿರುಚಾಡುತ್ತಾ ಆಗಮಿಸಿ, ''ನಮ್ಮದು ಬಡ ಕುಟುಂಬ. ದಿನವೂ ದುಡಿದರೆ ಮಾತ್ರ ಬದುಕಲು ಸಾಧ್ಯ, ನಾನು ಶಾಲಾ ಕೆಲಸಕ್ಕೆ ಹೋಗಿದ್ದೆ. ನಾನು ಹಿಂದಿರುಗುವ ವೇಳೆಗೆ ಮದ್ಯ ಕುಡಿದು ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು'' ಎಂದು ಕಣ್ಣೀರು ಸುರಿಸಿದ್ದಾರೆ.


 ಕಳ್ಳಭಟ್ಟಿ ಸೇವಿಸಿ ಅನಾರೋಗ್ಯಕ್ಕೀಡಾದ ಇನ್ನೂ ಸುಮಾರು 100 ಮಂದಿಯನ್ನು ವಿವಿಧ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಮತ್ತೆ ಹತ್ತು ಜನರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದೇ ವೇಳೆ, ಅಕ್ರಮ ಮದ್ಯ ಮಾರಾಟದ ಆರೋಪದ ಮೇಲೆ ದಂಪತಿ ಸೇರಿ ಮೂರು ಮಂದಿಯನ್ನು ಬಂಧಿಸಲಾಗಿದೆ. ಸುಮಾರು 200 ಲೀಟರ್ ಮದ್ಯ ಪತ್ತೆ ಹಚ್ಚಿಸಲಾಗಿದೆ.ಮುಖ್ಯಮಂತ್ರಿ ರಾಜೀನಾಮೆಗೆ ಪ್ರತಿಪಕ್ಷಗಳ ಒತ್ತಾಯ: ಮತ್ತೊಂದೆಡೆ, ಕಳ್ಳಭಟ್ಟಿ ದುರಂತವು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಇಂದು ವಿಧಾನಸಭೆಗೆ ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದಲ್ಲಿ AIADMK ಶಾಸಕರು ಕಪ್ಪು ಅಂಗಿಗಳನ್ನು ಧರಿಸಿ ಬಂದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜೀನಾಮೆ ನೀಡುವಂತೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಅಲ್ಲದೇ, ಈ ದುರಂತದ ಬಗ್ಗೆ ತಕ್ಷಣವೇ ಚರ್ಚಿಸಬೇಕು ಎಂದು ಪಟ್ಟು ಹಿಡಿದರು.

Ads on article

Advertise in articles 1

advertising articles 2

Advertise under the article