ಬೆಂಗಳೂರು: ಹೈಕೋರ್ಟ್ ವಕೀಲೆ, ಕೆಎಎಸ್ ಅಧಿಕಾರಿ ಪತ್ನಿ ನೇಣಿಗೆ ಶರಣು
Saturday, May 11, 2024
ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ವಕೀಲರಾಗಿದ್ದ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯನಗರ ಬಳಿಯಿರುವ ಅಣ್ಣಯ್ಯ ಲೇಔಟ್ ನಲ್ಲಿ ನಡೆದಿದೆ.
ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿಯಾಗಿರುವ ಚೈತ್ರಾ ಯಾರೂ ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಅವರ ಮೃತದೇಹ ಮನೆಯ ಫ್ಯಾನೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಘಟನೆ ನಡೆದಾಗ ಶಿವಕುಮಾರ್ ಅವರು ಹೊರಗಡೆ ಹೋಗಿದ್ದರು. ಅವರು ಪುನಃ ಮನೆಗೆ ಹಿಂದಿರುಗಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿರುವ ಶಿವಕುಮಾರ್ ಅವರು, 2016ರಲ್ಲಿ ಚೈತ್ರಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಐದು ವರ್ಷದ ಮಗಳು ಇದ್ದಾಳೆ.
ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಸಂಜಯ್ ನಗರ ಪೊಲೀಸರು, ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಚೈತ್ರಾ ಅವರ ಮೃತದೇಹದ ಪಕ್ಕ ಸಿಕ್ಕಿರುವ ಡೆತ್ ನೋಟ್ ನಲ್ಲಿ ನನಗೆ ಜೀವನ ಸಾಕಾಗಿದೆ. I am just leaving ಎಂದು ಬರೆಯಲಾಗಿದೆ. ಅದರಲ್ಲಿ ಪತಿಯ ವಿರುದ್ಧವಾಗಲೀ ಅಥವಾ ಮತ್ಯಾರದ್ದೇ ವಿರುದ್ಧವಾಗಲೀ ದೂರಿಲ್ಲ. ಆದರೂ, ಪೊಲೀಸರು ಮನೆಯ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ
ಡೆತ್ ನೋಟ್ ನಲ್ಲಿ ಅವರು, "ನಾನು ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ಆದರೆ, ಅದರಿಂದ ಆಚೆ ಬರಲು ನಾನು ಪ್ರಯತ್ನ ನಡೆಸಿದ್ದು, ಅದು ಸಾಧ್ಯವಾಗಲಿಲ್ಲ. ಹಾಗಾಗಿ, ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಲೈಫ್ ಎಂಜಾಯ್ ಮಾಡಿ ಹೇಳಿದ್ದಾರೆಂದು ಚೈತ್ರಾ ಬರೆದಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.