ಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ ನಡೆಯಲಿದೆ.
ಇಂದು ಎಸ್‌ಐಟಿ ಮುಂದೆ ಹಾಜರಾಗಬೇಕಿದ್ದ ಎಚ್.ಡಿ.ರೇವಣ್ಣ ಕೋರ್ಟ್ ಗೆ ನೇರ ಹಾಜರಾಗಿ ಜಾಮೀನು ಪಡೆಯಲು ಬಯಸಿದ್ದರು. ಆದರೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಕೊನೇ ಘಳಿಗೆಯಲ್ಲಿ ಹಾಜರಾತಿಯಿಂದ ಎಚ್.ಡಿ.ರೇವಣ್ಣ ಹಿಂದೆ ಸರಿದಿದ್ದಾರೆ. ಕೆ.ಆರ್.ನಗರದಲ್ಲಿ ಸಂತ್ರಸ್ತೆಯನ್ನು ಅಪಹರಣ ಮಾಡಿರುವ ಆರೋಪ ಹೊರಸಿ ಪುತ್ರ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ನಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ಅಪಹರಣ ಆರೋಪ ಜಾಮೀನು ರಹಿತ ಪ್ರಕರಣವಾಗಿರುವುದರಿಂದ ಬಂಧನ ಭೀತಿಯಿಂದ ಎಚ್.ಡಿ.ರೇವಣ್ಣ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಮುಂದಿನ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು. ಅದರಂತೆ ಇಂದು ವಿಚಾರಣೆ ನಡೆಯುವ ಸಾಧ್ಯತೆ.