ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣ - ಕಡೆಗೂ ಎಸ್ಐಟಿ ಬಲೆಗೆ ಪೆನ್ ಡ್ರೈವ್ ಬಾಯ್
Friday, May 31, 2024
ಬೆಂಗಳೂರು: ದೇಶದಲ್ಲಿಯೇ ಭಾರೀ ಸಂಚಲನ ಸೃಷ್ಟಿಸಿದ್ದ ಹಲವಾರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕಡೆಗೂ ಎಸ್ಐಟಿ ಬಲೆಗೆ ಬಿದ್ದಿದ್ದಾರೆ. ಇವರ ಬಂಧನಕ್ಕಾಗಿ ಕಳೆದ ಕೆಲದಿನಗಳಿಂದ ದೇವನಹಳ್ಳಿಯ ಕಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಎಸ್‌ಐಟಿ ಅಧಿಕಾರಿಗಳು ಗುರುವಾರ ತಡರಾತ್ರಿ 12.46ಕ್ಕೆ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲಿಗೆ ಅಬ್ಬಾ! ಅಂತೂ ಆರೋಪಿ ಸಿಕ್ಕಿ ಬಿದ್ದ ಅಂತಾ ನಿಟ್ಟುಸಿರು ಬಿಡುವಂತಾಯಿತು.
ಲೈಂಗಿಕ ದೌರ್ಜನ್ಯದ ಸಾವಿರಾರು ವೀಡಿಯೋಗಳಿರುವ ಪೆನ್ ಡ್ರೈವ್ ಹೊರಬರುತ್ತಿದ್ದಂತೆ ಎ.26ರಂದು ಪ್ರಜ್ವಲ್ ರಾತ್ರೋರಾತ್ರಿ ದೇಶ ಬಿಟ್ಟು ಪಲಾಯನಗೈದಿದ್ದರು. ಜರ್ಮನಿಯಲ್ಲಿದ್ದಾರೆ ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾದರೂ ಅವರು ದುಬೈ, ಲಂಡನ್ ಎಂದು ತಮ್ಮ ವಾಸ್ತವ್ಯ ಬದಲಿಸುತ್ತಲೇ ಇದ್ದರು. ಮೇ 27ರಂದು ಜರ್ಮನಿಯಿಂದಲೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪ್ರಜ್ವಲ್ ಮೇ 31ರಂದು ಭಾರತಕ್ಕೆ ಮರಳಿ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದರು.
ಇದರ ಬೆನ್ನಲ್ಲೇ, ಜರ್ಮನಿಯ ಮ್ಯೂನಿಚ್ ನಿಂದ ಮೇ 30ರಂದು ಬೆಂಗಳೂರಿಗೆ ವಿಮಾನ ಬುಕ್ಕಿಂಗ್ ಮಾಡಿದ್ದರು. ಲುಫ್ತಾನ್ಸಾ ಏರ್ ಲೈನ್ಸ್ ವಿಮಾನದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಭಾರತೀಯ ಕಾಲಮಾನ ಪ್ರಕಾರ ಸಂಜೆ 4.05ಕ್ಕೆ ಮ್ಯೂನಿಚ್ ನಿಂದ ಹೊರಟ ವಿಮಾನ ತಡರಾತ್ರಿ 12.50ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಪ್ರಜ್ವಲ್ ಲ್ಯಾಂಡ್ ಆಗುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ಮೊದಲು ವಶಕ್ಕೆ ಪಡೆದಿದ್ದಾರೆ. ಪ್ರಜ್ವಲ್ ಬಂಧನಕ್ಕೆ ಈಗಾಗಲೇ ಕೋರ್ಟ್ ವಾರಂಟ್ ಮತ್ತು ಬ್ಲ್ಯೂ ಕಾರ್ನರ್ ನೋಟೀಸ್ ಜಾರಿಯಲ್ಲಿದೆ. ಆದ್ದರಿಂದ ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್ ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ಬಳಿಕ ಎಸ್‌ಐಟಿ ಪೊಲೀಸರಿಗೆ ಒಪ್ಪಿಸಿದರು. ಬೆಂಗಳೂರು ವಿಮಾನ ನಿಲ್ದಾಣದಿಂದ ಬಿಗಿ ಭದ್ರತೆಯೊಂದಿಗೆ ಕಾರ್ಲ್ ಟನ್ ಭವನದಲ್ಲಿರುವ ಸಿಐಡಿ ಕಚೇರಿಗೆ ಪ್ರಜ್ವಲ್ ನನ್ನು ಕರೆತರಲಾಯಿತು. ಇಂದು ಬೆಳಗ್ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್‌ನ ವೈದ್ಯಕೀಯ ತಪಾಸಣೆ ನಡೆಸಿ ತದನಂತರ ಪ್ರಜ್ವಲ್‌ನನ್ನು ಕೋರ್ಟ್ ಗೆ ಹಾಜರುಪಡಿಸಿ ವಿಚಾರಣೆಗಾಗಿ ಎಸ್ಐಟಿ ತನ್ನ ವಶಕ್ಕೆ ಪಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.