ಇದೊಂದು ರಾಜಕೀಯ ಷಡ್ಯಂತ್ರ, ಸೂಕ್ತ ಪುರಾವೆಯಿಲ್ಲದೆ ಆರೋಪ ಹೊರಿಸಲಾಗಿದೆ; ಅರೆಸ್ಟ್ ಬಳಿಕ ಹೆಚ್ ಡಿ ರೇವಣ್ಣ ಮೊದಲ ಪ್ರತಿಕ್ರೀಯೆ h d Revanna
ಬೆಂಗಳೂರು: ''ಇದೊಂದು ರಾಜಕೀಯ ಷಡ್ಯಂತ್ರ. ಯಾವುದೇ ಸೂಕ್ತ ಪುರಾವೆಯಿಲ್ಲದೆ ನನ್ನ ಮೇಲೆ ಆರೋಪ ಹೊರಿಸಲಾಗಿದೆ'' ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಬಂಧನ ಬಳಿಕ ಮೊದಲ ಪ್ರತಿಕ್ರೀಯೆ ನೀಡಿದ್ದಾರೆ.
ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ಎಸ್ಐಟಿ ತಂಡದಿಂದ ಬಂಧನವಾಗಿರುವ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆಸ್ಪತ್ರೆಗೆ ತೆರಳುವಾಗ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ರಾಜ್ಯದ ಇತಿಹಾಸದಲ್ಲೇ ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ ಎಂದು ಆಪಾದಿಸಿದರು.
''ನನ್ನ 40 ವರ್ಷದ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲ. ಇದು ದುರುದ್ದೇಷಪೂರಿತ ಆರೋಪ. ಏಪ್ರಿಲ್ 28ರಂದು ನನ್ನ ಮೇಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಯಾವುದೇ ಪುರಾವೆಯಿಲ್ಲದೆ ಮೇ 2ರಂದು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ರಾಜಕೀಯ ಇತಿಹಾಸದಲ್ಲೇ ಇದೊಂದು ದೊಡ್ಡ ರಾಜಕೀಯ ಷಡ್ಯಂತ್ರ. ನನಗೆ ಇದನ್ನ ಎದುರಿಸುವ ಶಕ್ತಿಯಿದೆ. ನಾನು ಎಲ್ಲವನ್ನ ಹೇಳುತ್ತೇನೆ. ಈಗಲೇ ಏನನ್ನೂ ಮಾತನಾಡಲ್ಲ'' ಎಂದರು.