ನೈರುತ್ಯ ಪದವೀಧರ ಕ್ಷೇತ್ರ- ಪ್ರಬಲ ಸ್ಪರ್ಧಿಯಾಗಿ ಆಯನೂರು ಮಂಜುನಾಥ್
ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಅನುಭವಿ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಕಣಕ್ಕಿಳಿದಿರುವ ಡಾ.ಧನಂಜಯ ಸರ್ಜಿ ನಡುವೆ ನೇರ ಹಣಾಹಣಿ ಏರ್ಪಪಟ್ಟಿದೆ.
ನೈರುತ್ಯ ಪದವೀಧರ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಹೊನ್ನಾಳಿ (30 ವಿಧಾನಸಭಾ, 5 ಲೋಕಸಭಾ ಕ್ಷೇತ್ರ) ವ್ಯಾಪ್ತಿಯನ್ನು ಒಳಗೊಂಡಿರುವ ವಿಶಾಲ ಕ್ಷೇತ್ರ. ಈ ಬಾರಿ 11 ಮಂದಿ ಕಣದಲ್ಲಿದ್ದಾರೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಆಯನೂರು ಮಂಜುನಾಥ ಅವರು ಈ ಹಿಂದೆ ಲೋಕಸಭಾ ಸದಸ್ಯ, ಶಾಸಕ, ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯಸಭಾ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದೇನೆ. ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದಿದ್ದೇನೆ. ಈಗಲೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೋರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.
ಕಳೆದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದ ಆಯನೂರು ಮಂಜುನಾಥ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.