ಮಂಗಳೂರು: ಜ್ವರಪೀಡಿತನಿಗೆ ಪಶುವೈದ್ಯಾಧಿಕಾರಿಯೊಬ್ವರು ಹಲ್ಲೆ ನಡೆಸಿದ ಪರಿಣಾಮ ಆತ ಕುಸಿದುಬಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಕೊಕ್ಕಡ ಜೋಡುಮಾರ್ಗ ಸರ್ಕಲ್ ಬಳಿ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಪಶುವೈದ್ಯ ಡಾ.ಕುಮಾರ್ ನನ್ನು ಬಂಧಿಸಿದ್ದಾರೆ.
ಕೊಕ್ಕಡ ನಿವಾಸಿ ಕೃಷ್ಣ ಯಾನೆ ಕಿಟ್ಟ(58) ಮೃತಪಟ್ಟವರು.
ವಿಪರೀತ ಜ್ವರವಿದ್ದ ಹಿನ್ನೆಲೆಯಲ್ಲಿ ಕೃಷ್ಣ ಅವರು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಕೆಯಾದ ಬಳಿಕ ಕೊಕ್ಕಡಕ್ಕೆ ವಾಪಾಸ್ಸಾಗಿದ್ದರು. ಈ ವೇಳೆ ಅವರಿಗೆ ಆಪ್ತರಾಗಿದ್ದ ಪಶುವೈದ್ಯ ಡಾ.ಕುಮಾರ್ ಸಿಕ್ಕಿದ್ದಾರೆ. ಅವರು ಕೃಷ್ಣರೊಂದಿಗೆ ಮಾತನಾಡುತ್ತ ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ ಬಂದೆ. ಆರೋಗ್ಯ ಸುಧಾರಿಸುವವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿತ್ತು ಎಂದು ಬುದ್ಧಿಮಾತು ಹೇಳಿ ಒಂದೇಟು ಹೊಡೆದಿದ್ದಾರೆ.
ಹೊಡೆದ ರಭಸಕ್ಕೆ ಕೃಷ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ವೈದ್ಯರು ಹೊಡೆದ ಕಾರಣಕ್ಕೆ, ಜ್ವರದಿಂದ ಬಳಲಿ ಕೃಷ್ಣ ಸಾವನ್ನಪ್ಪಿದ್ದಾರೆಯೋ ಎಂಬುದು ಇನ್ನೂ ತಿಳಿದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಕೃಷ್ಣರವರ ಪತ್ನಿ ಭಾರತಿ ಪಶುವೈದ್ಯಾಧಿಕಾರಿ ಡಾ.ಕುಮಾರ್ ಮೇಲೆ ದೂರು ನೀಡಿದ್ದಾರೆ. ಪಶುವೈದ್ಯಾಧಿಕಾರಿ ಡಾ.ಕುಮಾರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.