ವಿಚಿತ್ರ ಪ್ರಕರಣ- 55 ಲಕ್ಷ ರೂ. ಕಳ್ಳತನ; ಇನ್‌ಸ್ಟಾಗ್ರಾಮ್ ರೀಲ್ನಿಂದ ಸಿಕ್ಕಿಬಿದ್ದ ಕಳ್ಳಿಯರು
ಮುಂಬಯಿ: 55 ಲಕ್ಷ ರೂ.ಗಳ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸೋದರಿಯರನ್ನು ಪತ್ತೆ ಹಚ್ಚಿ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. Instagram ರೀಲ್ ಸಹಾಯದಿಂದ ಇಬ್ಬರು ಸೋದರಿಯರ ಕಳ್ಳತನ ಬಯಲಾಗಿದೆ. ಈ ಇಬ್ಬರೂ ಸೋದರಿಯರು ವೃದ್ಧ ದಂಪತಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ವೃದ್ಧ ದಂಪತಿಯ ಮನೆಯಲ್ಲಿದ್ದ 55 ಲಕ್ಷ ರೂಪಾಯಿ ಮೌಲ್ಯದ ಗೋಲ್ಡ್, ಬೆಲೆಬಾಳುವ ಬಟ್ಟೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು.
ನಂತರ ಅದೇ ಬೆಲೆ ಬಾಳುವ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ Instagram ರೀಲ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ರೀಲ್ ಸಹಾಯದಿಂದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬಯಿನ ಕಲಾಚೌಕಿ ಪೊಲೀಸರು ಈ ಇಬ್ಬರು ಸೋದರಿಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಛಾಯಾ ವೆಟ್ಕೋಲಿ(24) ಮತ್ತು ಭಾರತಿ ವೆಟ್ಕೋಲಿ (21) ಎಂದು ಗುರುತಿಸಲಾಗಿದೆ.
ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ಬಟ್ಟೆಗಳು ನಾಪತ್ತೆಯಾಗಿರುವುದು ತಿಳಿದ ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮನೆಗೆ ಕೆಲಸಕ್ಕೆ ಬರುವ ಇಬ್ಬರು ಸಹೋದರಿಯರ ಬಗ್ಗೆ ವೃದ್ಧ ದಂಪತಿಗಳಿಗೆ ಶಂಕೆಯಿರುವುದನ್ನು ತಿಳಿಸಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ, ಇಬ್ಬರು ಸೋದರಿಯರು ರೀಲ್ಸ್ ಅನ್ನು ಪೊಲೀಸರು ಗಮನಿಸಿದ್ದು, ಪೊಲೀಸರು ಮೊದಲು ವೃದ್ಧ ದಂಪತಿಯಿಂದ ಆಭರಣ ಮತ್ತು ಬಟ್ಟೆಗಳನ್ನು ಗುರುತಿಸಿದ್ದಾರೆ. ಆ ಬಳಿಕ ಇಬ್ಬರು ಸೋದರಿಯರ ಸ್ಥಳ ಪತ್ತೆ ಹಚ್ಚಿದಾಗ ಅವರು ರಾಯಗಡದಲ್ಲಿ ಇರುವುದು ಪತ್ತೆಯಾಗಿದೆ.
ಸೋದರಿಯರಾದ ಛಾಯಾ ಮತ್ತು ಭಾರತಿ ವೆಟ್ಕೋಲಿ ಅವರನ್ನು ರಾಯಗಡದಿಂದ ಪೊಲೀಸರು ಬಂಧಿಸಿದ್ದು, ಅವರಿಂದ 55 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೊಲೀಸರು ಇಬ್ಬರು ಸೋದರಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 381 ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.