ಉಪ್ಪಿನಂಗಡಿ: ಬಾಲಕ ಆತ್ಮಹತ್ಯೆಗೆ ಶರಣು
Saturday, April 20, 2024
ಉಪ್ಪಿನಂಗಡಿ: ಎಂಟನೇ ತರಗತಿ ವಿದ್ಯಾರ್ಥಿ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಉಪ್ಪಿನಂಗಡಿಯ ಕರಾಯ ಗ್ರಾಮದ ಶಿವಗಿರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಪಂಜದ ದಿ.ರೋಹಿತ್ ಗೌಡ ಎಂಬವರ ಪುತ್ರ. ಈತ ತನ್ನ ತಂದೆಯ ನಿಧನದ ಬಳಿಕ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು ಉಪ್ಪಿನಂಗಡಿಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಖಾಸಗಿ ಈತ ಏಳನೇ ತರಗತಿ ಉತ್ತೀರ್ಣನಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ.
ಶುಕ್ರವಾರ ಈತ ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ತಿಳಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಮನನೊಂದ ಆತ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.