ಎರಡು ತಿಂಗಳ ಹಿಂದಷ್ಟೇ ವಿವಾಹವಾದ ನವವಿವಾಹಿತ ಫ್ಲೈಓವರ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿ ಇನ್ನಷ್ಟೇ ದಾಂಪತ್ಯ ಜೀವನ ಆರಂಭಿಸಿದ್ದ ನವವಿವಾಹಿತನೋರ್ವನು ನಾಯಂಡಹಳ್ಳಿ ಫೈಓವರ್‌ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಗುತ್ತಿಗೆ ನೌಕರ ನವೀನ್ ಕುಮಾರ್ (30) ಆತ್ಮಹತ್ಯೆಗೆ ಶರಣಾದ ಯುವಕ. 

ನವೀನ್ ತನ್ನ ಬೈಕನ್ನು ಫೈಓವ‌ರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಹಾರಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಕಳೆದ 3-4 ತಿಂಗಳಿನಿಂದ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾನೆ. ಬಳಿಕ ಬೈಕ್‌ ಪಾರ್ಕ್ ಮಾಡಿ, ಫೈಓವರ್ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ನವೀನ್ ಗೆ 2 ತಿಂಗಳ ಹಿಂದಷ್ಟೇ ವಿವಾಹವಾಗಿದೆ. ಆತ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಮೇಲೆ ಹೋಗಿ ಬರ್ತೀನಿ ಎಂದು ಎಪ್ರಿಲ್ 11ರಂದು ಮನೆಯಿಂದ ಹೊರಟಿದ್ದ ನವೀನ್, ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.