ಗದಗ: ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿರುವ ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ದೊರಕಿದೆ. ಮನೆ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಆಸ್ತಿ ಮೇಲಿನ ಆಸೆಗೆ ಮನೆಯ ಹಿರಿಯ ಪುತ್ರ ವಿನಾಯಕ ಹಾಗೂ ತನ್ನ ತಂದೆ ಹಾಗೂ ಮಲತಾಯಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆದರೆ, ಸುಪಾರಿ ಕಿಲ್ಲರ್ಸ್ ಎಡವಟ್ಟಿನಿಂದ ಅಂದ ಮನೆಗೆ ಬಂದಿದ್ದ ಅಮಾಯಕ ಅತಿಥಿಗಳು ಜೀವ ತೆತ್ತಿದ್ದಾರೆ.
ಗದಗದ ದಾಸರ ಓಣಿಯಲ್ಲಿ ಮನೆಯೊಂದರಲ್ಲಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ನಾಲ್ವರ ಭೀಕರ ಹತ್ಯೆಯಾಗಿತ್ತು. ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆಯವರನ್ನು ಟಾರ್ಗೆಟ್ ಮಾಡಿ ಈ ಕೃತ್ಯ ನಡೆದಿತ್ತು. ಹಂತಕರು ಮನೆಗೆ ನುಗ್ಗಿ ಮೇಲಿನ ಮಹಡಿಯಲ್ಲಿ ಮಲಗಿದ್ದ ಪ್ರಕಾಶ್ ಅವರ ಕಿರಿಯಪುತ್ರ ಕಾರ್ತಿಕ್ ಬಾಕಳೆ (28), ಮನೆಗೆ ಬಂದಿದ್ದ ಸಂಬಂಧಿಕರಾದ ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಮತ್ತು ಅವರ ಪುತ್ರಿ ಆಕಾಂಕ್ಷಾ (16) ಅವರನ್ನು ಹತ್ಯೆ ಮಾಡಿದ್ದರು. ಮಹಡಿಯಲ್ಲಿ ಸದ್ದು ಕೇಳಿ ಆತಂಕಗೊಂಡ ಪ್ರಕಾಶ್ ಬಾಕಳೆ ಪೊಲೀಸರಿಗೆ ಕರೆ ಮಾಡಿದಾಗ ಕಿಲ್ಲರ್ಸ್ ಅಲ್ಲಿಂದ ಪರಾರಿಯಾಗಿದ್ದಾರೆ.
ಕೊಲೆಯಾದ ದಿನ ಸ್ಥಳದಲ್ಲಿಯೇ ಆರೋಪಿ ಹಿರಿಯಪುತ್ರ ವಿನಾಯಕ ಇದ್ದ. ಆತನೇ ಪೊಲೀಸರಿಗೆ ಖುದ್ದಾಗಿ ಮಾಹಿತಿಗಳನ್ನು ನೀಡಿದ್ದ. ಈ ವೇಳೆ ತನಗೇನೂ ಗೊತ್ತಿಲ್ಲದಂತೆ ನಟಿಸಿದ್ದ. ಆರೋಪಿ ವಿನಾಯಕ, ಹತ್ಯೆನಡೆದ ಮನೆ ಯಜಮಾನ ಪ್ರಕಾಶ್ ಬಾಕಳೆಯವರ ಮೊದಲ ಪತ್ನಿಯ ಪುತ್ರ. ಈತನೇ ಮಹಾರಾಷ್ಟ್ರ ಮೂಲದ ಫಯಾಜ್ ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಸದ್ಯ ಪೊಲೀಸರು ಆರೋಪಿಗಳಾದ ವಿನಾಯಕ ಸೇರಿದಂತೆ ಸುಮಾರಿ ಕಿಲ್ಲರ್ಸ್ ಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಸಾಹಿಲ್ ಖಾಜಿ, ಸೊಹೇಲ್ ಖಾಲಿ, ಸುಲ್ತಾನ್ ಶೇಖ್, ಮಹೇಶ್ ಸಾಳಂಕಿ, ವಾಹಿದ್ ಬೇಪಾರಿ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕಾಶ ಬಾಕಳೆಯವರಿಗೆ ಇಬ್ಬರು ಪತ್ನಿಯರು. ಮೊದಲನೇ ಪತ್ನಿಗೆ ಮೂವರು ಮಕ್ಕಳು. ಹಿರಿಯ ಪುತ್ರ ವಿನಾಯಕ, ಎರಡನೇ ಪುತ್ರ ದತ್ತಾತ್ರೇಯ, ಮತ್ತೊಬ್ಬಳು ಪುತ್ರಿ. ಆಕೆಗೆ ಮದುವೆ ಮಾಡಿಕೊಡಲಾಗಿದೆ. ಹಿರಿಯ ಪುತ್ರ ಮನೆಯಲ್ಲಿಯೇ ಇದ್ದುಕೊಂಡು ಮರ್ಡರ್ ಗೆ ಸ್ಕೆಚ್ ಹಾಕಿದ್ದಾನೆ. ಎರಡನೇ ಪುತ್ರ ದತ್ತಾತ್ರೇಯ ಬಾಕಳೆ ವಿರುದ್ಧ ನಕಲಿ ಗೋಲ್ಡ್ ಅಡವಿಟ್ಟು ಬ್ಯಾಂಕ್‌ಗೆ ಫ್ರಾಡ್ ಮಾಡಿರುವ ಆರೋಪ ಇದೆ. ಗದಗ, ಮುಂಡರಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಗೋಲ್ಡ್ ಅಡವಿಟ್ಟು ಹಣ ಪಡೆಯಲು ದತ್ತಾತ್ರೇಯ ಪ್ಲಾನ್ ಮಾಡಿದ್ದ. ಅಮಾಯಕರ ಹೆಸರಲ್ಲಿ ಖಾತೆ ತೆಗೆದು, ಬ್ಯಾಂಕ್‌ಗೆ ಮೋಸ ಎಸಗಿದ್ದಾನೆ. ದತ್ತಾತ್ರೇಯ ಸೇರಿ 18 ಜನರ ಟೀಮ್ ಗದಗಿನ ಐಡಿಎಫ್‌ಸಿ ಬ್ಯಾಂಕಿನಲ್ಲಿ 4 ಕೆಜಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ನಿಂದ 45 ಕೋಟಿ ರೂಪಾಯಿ ಹಣ ಪಡೆಯಲು ಮುಂದಾಗಿತ್ತು. ವಿವಿಧೆಡೆ ಬ್ಯಾಂಕ್ ಫ್ರಾಡ್ ಕೇಸ್‌ನಲ್ಲಿ ಭಾಗಿಯಾಗಿ ದತ್ತಾತ್ರೇಯ ಅಲಿಯಾಸ್ ದತ್ತು ಅಲಿಯಾಸ್ ಯಶ್ ಬಾಕಳೆ ತಲೆಮರೆಸಿಕೊಂಡಿದ್ದು, ಹೀಗಾಗಿ ಆತನನ್ನು ತಂದೆ ಪ್ರಕಾಶ್ ಬಾಕಳೆ ದೂರ ಇಟ್ಟಿದ್ದರು. ಆತನ ಮೇಲೆಯೇ ಅನುಮಾನವನ್ನೂ ಪಟ್ಟಿದ್ದರು.
ಆದರೆ ಹಿರಿಯ ಪುತ್ರ ವಿನಾಯಕ ಎಲ್ಲ ಆಸ್ತಿಯೂ ತನಗೇ ದೊರಕಬೇಕೆಂದು ಮಲತಾಯಿ ಸುನಂದಾ ಮತ್ತು ತಂದೆಯನ್ನು ಮುಗಿಸಲು ಸ್ಕೆಚ್ ಹಾಕಿದ್ದ. ದತ್ತಾತ್ರೇಯ ಮೇಲೆ ಆರೋಪ ಹೊರಿಸಿ ತಾನು ಪಾರಾಗಬಹುದು ಎಂದು ಉಪಾಯ ಹೂಡಿದ್ದ. ಆದರೆ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ಸಿಕ್ಕಿದ್ದು ಮಹಾರಾಷ್ಟ್ರದ ಸುಪಾರಿ ಗ್ಯಾಂಗ್ ಎನ್ನುವ ಸುಳಿವು ಸಿಕ್ಕಿತ್ತು. ಪೊಲೀಸರು ಆರೋಪಿಗಳ ಬೆನ್ನು ಹತ್ತಿದಾಗ ಸುಪಾರಿ ಪ್ರಕರಣ ಬಯಲಾಗಿದೆ.