ಮಗುವಿಗೆ ಎದೆಹಾಲು ಉಣಿಸುವಾಗ ಶಿಶು ಸಾವು: ಮನನೊಂದು ತಾಯಿಯೂ ಆತ್ಮಹತ್ಯೆಗೆ ಶರಣು


ಕಡಬ: ಎದೆಹಾಲು ಉಣಿಸುವ ವೇಳೆ ಮಗು ಉಸಿರುಗಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಕುಂಜ ಗ್ರಾಮದಲ್ಲಿ ನಡೆದಿದೆ. 

ಕಡಬ ತಾಲೂಕಿನ ರಾಮಕುಂಜ ನಿವಾಸಿ ವನಿತಾ (38) ಆತ್ಮಹತ್ಯೆ ಮಾಡಿಕೊಂಡ‌ ದುರ್ದೈವಿ.

ವನಿತಾ ಅವರಿಗೆ ಮೂರು ವರ್ಷದ ಗಂಡು ಶಿಶು ಇತ್ತು.  ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣುಮಗುವಿಗೆ ಎದೆಹಾಲು ಉಣಿಸಿ ವನಿತಾ ಮಗುವನ್ನು ತಕ್ಷಣ ಮಲಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಇದರಿಂದ ವನಿತಾ ಮಾನಸಿಕವಾಗಿ ನೊಂದು ಖಿನ್ನತೆಗೊಳಗಾಗಿದ್ದರು. ಇದಕ್ಕೆ ಚಿಕಿತ್ಸೆ ಕೊಡಿಸಲು ಪತಿ, ವನಿತಾರನ್ನು ಅವರ ತವರುಮನೆ ರಾಮಕುಂಜದಲ್ಲಿ ಬಿಟ್ಟು ಹೋಗಿದ್ದರು. ಆದರೆ ಎಪ್ರಿಲ್ 2ರಂದು ಮನೆಯವರೆಲ್ಲಾ ಹೊರಹೋಗಿದ್ದ ವೇಳೆ ವನಿತಾ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವನಿತಾ ಅವರ ಸಹೋದರ ದಿವಾಕ‌ರ್ ಕೆ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.