ಯೂಟ್ಯೂಬ್ ನಲ್ಲಿ ವೀಕ್ಷಣೆ ಹೆಚ್ಚಿಸಲು ಹೋಗಿ ಎಡವಟ್ಟು ಮಾಡಿಕೊಂಡ ಯೂಟ್ಯೂಬರ್ - ನಿರ್ಬಂಧಿತ ಪ್ರದೇಶದಲ್ಲಿ ವೀಡಿಯೊ ಶೂಟ್ ಮಾಡಿದ್ದಕ್ಕೆ ಅರೆಸ್ಟ್

ಬೆಂಗಳೂರು: ಯೂಟ್ಯೂಬ್ ನಲ್ಲಿ ವೀಕ್ಷಣೆ  ಹೆಚ್ಚಿಸಿಕೊಳ್ಳಬೇಕೆಂದು ಯೂಟ್ಯೂಬರ್ ಗಳು ಏನೇನೋ ಮಾಡುತ್ತಾರೆ‌. ಹೀಗೆ ಏನೇನೋ ಅವಾಂತರ ಮಾಡಿ  ಇಲ್ಲೊಬ್ಬ ಯೂಟ್ಯೂಬರ್ ಏರ್‌ಪೋರ್ಟ್‌ನಲ್ಲಿ ವೀಡಿಯೊ ಮಾಡಿ ಪೊಲೀಸ್ ಅತಿಥಿಯಾಗಿದ್ದಾನೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ವೀಡಿಯೊ ಶೂಟ್ ಮಾಡಿದ ಯುಟ್ಯೂಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಮೂಲದ ಯುಟ್ಯೂಬರ್ ವಿಕಾಸ್ ಗೌಡ ಬಂಧಿತ ಆರೋಪಿ. ಈತ ಏರ್ಪೋರ್ಟ್ ರನ್ ವೇ ಚಿತ್ರೀಕರಣ ಮಾಡಿ ಅದರ ವೀಡಿಯೋವನ್ನು ಯೂಟ್ಯೂಬ್ ಗೆ ಹಾಕಿ ತಾನು ಟಿಕೆಟ್ ಇಲ್ಲದೆಯೇ ಒಳಗಡೆ ಪ್ರವೇಶ ಮಾಡಿದ್ದೇನೆ. 24 ಗಂಟೆ ಗಳ ಕಾಲ ರನ್ ವೇ ಬಳಿಯೇ ಇದ್ದೆ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಸಿಐಎಸ್‌ಎಫ್ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ. ಆದ್ದರಿಂದ ಏರ್‌ಪೋರ್ಟ್ ಠಾಣಾ ಪೊಲೀಸರು ಯುಟ್ಯೂಬ‌ರ್ ವಿಕಾಸ್ ಗೌಡನನ್ನು ಬಂಧಿಸಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿರುವುದಾಗಿ ಹೇಳಿದ್ದಾನೆ. ಆದರೆ ಟಿಕೆಟ್ ಪಡೆದು ಪ್ರಯಾಣ ಮಾಡದೇ ಯುವಕ ರನ್ ವೇನಲ್ಲಿ ಉಳಿದುಕೊಂಡಿದ್ದ. ಸುಮಾರು ನಾಲ್ಕೈದು ಗಂಟೆಗಳ ಕಾಲ ಅಲ್ಲಿಯೇ ಇದ್ದು ವೀಡಿಯೊ ಮಾಡಿಕೊಂಡು ಬಂದಿದ್ದಾನೆ.