ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ, ನಾಳೆ ನನ್ನ ನಿರ್ಧಾರ ಪ್ರಕಟ: ಡಿ.ವಿ. ಸದಾನಂದಗೌಡ
Monday, March 18, 2024
ಬೆಂಗಳೂರು: ಹಾಲಿ ಸಂಸದ ಡಿ.ವಿ. ಸದಾನಂದಗೌಡ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಮಾ.19ರಂದು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದ ಬಳಿ ಅಭಿಮಾನಿಗಳು, ಹಿತೈಷಿಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ಸೋಮವಾರ ತಮ್ಮ 72ನೆ ಜನ್ಮದಿನ ಆಚರಿಸಿಕೊಂಡಿದ್ದಾರೆ. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೆಲವು ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಆದರೆ, ವೈಯಕ್ತಿಕವಾಗಿ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ನಾನು ಮುಂದಿನ ತೀರ್ಮಾನವನ್ನು ಪ್ರಕಟಿಸುತ್ತೇನೆ ಎಂದರು.
ಬಿಜೆಪಿ ಪ್ರಮುಖ ಮುಖಂಡರೊಬ್ಬರು ನಿನ್ನೆ ನಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ನಡೆದ ಮಾತುಕತೆಯ ವಿವರವನ್ನು ನಾನು ಹೇಳುವುದಿಲ್ಲ. ಇವತ್ತೆ ಎಲ್ಲವನ್ನೂ ಹೇಳಿಬಿಟ್ಟರೆ ನಾಳೆ ಏನು ಉಳಿಯುವುದಿಲ್ಲ. ಆದುದರಿಂದ, ನಾಳೆ ಎಲ್ಲ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಸದಾನಂದಗೌಡ ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಲು ನಡೆಸಿದಂತಹ ಸಮೀಕ್ಷೆಯಲ್ಲಿ ಕೇವಲ ನನ್ನ ಹೆಸರು ಮಾತ್ರ ವರದಿಯಲ್ಲಿ ಬಂದಿತ್ತು. ನನಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ, ಕೊನೆ ಕ್ಷಣದಲ್ಲಿ ನನ್ನ ರಕ್ಷಣೆಗೆ ಬಂದಿಲ್ಲ. ದಿಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ನಡೆದ ಕೆಲವು ವಿದ್ಯಾಮಾನಗಳು ನನ್ನ ಗಮನಕ್ಕೆ ಬಂದಿದೆ ಎಂದು ಸದಾನಂದಗೌಡ ತಿಳಿಸಿದರು.
ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಲು ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ ತಿಳಿದು ಹೀಗೆ ಮಾಡಿರುವುದರಿಂದ ಬೇಸರವಾಗಿದೆ ಎಂದು ಸದಾನಂದಗೌಡ ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಅನ್ನು ತಮ್ಮ ಬದಲು ಶೋಭಾ ಕರಂದ್ಲಾಜೆಗೆ ನೀಡಿರುವುದು ಸದಾನಂದಗೌಡ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿನ ಅಸಮಾಧಾನವನ್ನು ಬಳಸಿಕೊಳ್ಳಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮುಖಾಂತರ, ಸದಾನಂದಗೌಡ ಅವರಿಗೆ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸದಾನಂದಗೌಡ ಕಾಂಗ್ರೆಸ್ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸದಾನಂದಗೌಡರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.