ಮಂಗಳೂರು: ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಪುತ್ತಿಲ ಮರಳಿಗೂಡಿಗೆ - ಬಂಡಾಯ ಶಮನ


ಮಂಗಳೂರು: ದ.ಕ. ಲೋಕಸಭಾ ಕಣದಲ್ಲಿ ಬಿಜೆಪಿಗೆ ಮಗ್ಗಲು ಮುಳ್ಳಾಗಬಹುದು ಎಂಬ ಅರುಣ್ ಕುಮಾರ್ ಪುತ್ತಿಲ‌ ಬಂಡಾಯ‌ ಅವರು ಮರಳಿಗೂಡಿಗೆ ಸೇರ್ಪಡೆಯಾಗುವ ಮೂಲಕ ಶಮನಗೊಂಡಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಬಾರಿಗರ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದರಲ್ಲಿ‌ ಬಹುದೊಡ್ಡ ಅಸಮಾಧಾನವಿದ್ದದ್ದು ಪುತ್ತಿಲ ಪರಿವಾರಕ್ಕೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಲಾಗಿತ್ತು. ಇದರಿಂದ ಬಂಡಾಯವೆದ್ದ ಅವರು ಪುತ್ತಿಲ ಪರಿವಾರ ಎಂಬ ಸಂಘಟನೆಯಡಿ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯೆದುರು ಕಡಿಮೆ‌ ಅಂತರದಲ್ಲಿ ಸೋಲನ್ನಪ್ಪಿದ್ದರು. ತನ್ನದೆ ಭದ್ರಕೋಟೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿತ್ತು. ಈ ಮೂಲಕ ತನ್ನ ಶಕ್ತಿಯನ್ನು ಪುತ್ತಿಲ ಪ್ರದರ್ಶಿಸಿದ್ದರು

ಆ ಬಳಿಕ ಪುತ್ತಿಲರನ್ನು ಬಿಜೆಪಿಗೆ ಕರೆ ತರುವಲ್ಲಿ ಹಲವು ಪ್ರಯತ್ನಗಳು ನಡೆದರೂ ಯಶಸ್ವಿಯಾಗಿರಲಿಲ್ಲ. ತನ್ನ ಬೇಡಿಕೆಗೆ ಒಪ್ಪದೆ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಬಿಜೆಪಿ ಅಭ್ಯರ್ಥಿಗೆ ಬಂಡಾಯವಾಗಿ ಅರುಣ್ ಕುಮಾರ್ ಪುತ್ತಿಲ ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಇತ್ತೀಚೆಗೆ ಪುತ್ತಿಲ ಪರಿವಾರ ಘೋಷಿಸಿತ್ತು. ಅರುಣ್ ಕುಮಾರ್ ಪುತ್ತಿಲ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ ಬಿಜೆಪಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಕ್ಯಾ.ಬೃಜೇಶ್ ಚೌಟ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಅರುಣ್ ಕುಮಾರ್ ಪುತ್ತಿಲ ನಿರ್ಧಾರ ಬದಲಾಗಿದೆ. ಅರುಣ್ ಕುಮಾರ್ ಪುತ್ತಿಲ ಗುರುವಾರದಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರಲು‌ ನಿರ್ಧರಿಸಿದ್ದಾರೆ. ಈ ಮೂಲಕ ಪಕ್ಷೇತರ ಸ್ಪರ್ಧಿಸುವ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.