ಸ್ನೇಹಿತನ ಗುದನಾಳಕ್ಕೆ ಏರ್‌ಪ್ರೆಷರ್ ನಿಂದ ಗಾಳಿ : ಹುಚ್ಚಾಟದಿಂದ ಕರುಳು ಬ್ಲಾಸ್ಟ್ ಆಗಿ ಯುವಕ ಮೃತ್ಯು
Friday, March 29, 2024
ಬೆಂಗಳೂರು: ಸ್ನೇಹಿತನ ಹುಚ್ಚಾಟದಿಂದ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ಏರ್‌ಪ್ರೆಷರ್ ಪೈಪ್‌ನಿಂದ ಗುದನಾಳಕ್ಕೆ ಗಾಳಿ ಬಿಟ್ಟ ಪರಿಣಾಮ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್ ಆಗಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ವಿಜಯಪುರ ಮೂಲದ ಯೋಗೀಶ್ (24) ಮೃತ ಯುವಕ. ಘಟನೆ ಸಂಬಂಧಿಸಿದಂತೆ ಪೊಲೀಸರು ಯೋಗೀಶ್ ಸ್ನೇಹಿತ ಆರೋಪಿ ಮುರಳಿ (25) ಯನ್ನು ವಶಕ್ಕೆ ಪಡೆದಿದ್ದಾರೆ.
ಮೃತ ಯೋಗೀಶ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಥಣಿಸಂದ್ರದಲ್ಲಿ ವಾಸವಿದ್ದ. ಮಾರ್ಚ್ 25ರಂದು ಬೈಕ್ ರಿಪೇರಿ ಮಾಡಿಸಲೆಂದು ಯೋಗೀಶ್ ಸಂಪಿಗೆಹಳ್ಳಿಯಲ್ಲಿರುವ ಸಿಎನ್‌ಸಿ ಸರ್ವೀಸ್ ಸೆಂಟರ್‌ಗೆ ಆಗಮಿಸಿದ್ದಾನೆ. ಈ ಸಿಎನ್‌ಎಸ್ ಸರ್ವೀಸ್ ಸೆಂಟರ್‌ನಲ್ಲಿ ಯೋಗೀಶ್ ಸ್ನೇಹಿತ ಮುರಳಿ ಕೆಲಸ ಮಾಡುತ್ತಿದ್ದ.
ಈ ಸರ್ವೀಸ್ ಸೆಂಟರ್‌ನಲ್ಲಿದ್ದ ಏರ್‌ಪ್ರೆಷರ್ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮುರುಳಿ ಮೊದಲಿಗೆ ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದಾನೆ. ಬಳಿಕ ಆತ ಗುದನಾಳಕ್ಕೆ ಏರ್‌ಪ್ರೆಷರ್‌ನಿಂದ ಗಾಳಿ ಬಿಟ್ಟಿದ್ದಾನೆ. ಪರಿಣಾಮ ಯೋಗೀಶ್ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಡಿದ್ದಾನೆ. ಆದ್ದರಿಂದ ಮುರಳಿ ಸ್ಥಳೀಯ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೀಶ್ ಮೃತಪಟ್ಟಿದ್ದಾನೆ. ಸದ್ಯ ಮೃತ ಯೋಗೇಶ್ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ವಶಕ್ಕೆ ಪಡೆದಿದ್ದಾರೆ.