ಕಸದ ರಾಶಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ

ಬಾಗೇಪಲ್ಲಿ: ಇಲ್ಲಿನ ಮಿಟ್ಟೇಮರಿ ಹೋಬಳಿ ಕಾನಗಮಾಕಲಪಲ್ಲಿ ಗ್ರಾಮದ ಪರಿಶಿಷ್ಟ ಕಾಲನಿಯ ಹಿಂಭಾಗದ ಕಸದ ರಾಶಿಯಲ್ಲಿ ನವಜಾತ ಗಂಡು ಶಿಶುವಿನ ಕಳೇಬರ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರನ್ವಯ ಶಿಶುವಿನ ಮೃತದೇಹವನ್ನು ಪರಿಶೀಲಿಸುತ್ತಿದ್ದು ಸ್ಥಳಿಯರು ಅಥವಾ ಬೇರೆ ಊರನಿಂದ ಬಂದವರು ಯಾರಾದರೂ ಶಿಶುವಿನ ಮೃತದೇಹವನ್ನು ಕಸದ ರಾಶಿಯಲ್ಲಿ ಬಿಸಾಡಿ ಹೋಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಟ್ಟಿದ್ದು, ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಹೊರಬೀಳಲಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.