ಉಡುಪಿ: ಚಿರತೆಯೊಂದು ದಾಳಿ ನಡೆಸಿರುವ ಪರಿಣಾಮ ಕಾರ್ಮಿಕರೊಬ್ಬರು ಗಾಯಗೊಂಡ ಘಟನೆ ಶಿರ್ವ ಗ್ರಾಪಂ ವ್ಯಾಪ್ತಿಯ ಕಲ್ಲೊಟ್ಟು ಬಳಿ ರವಿವಾರ ರಾತ್ರಿ ವೇಳೆ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ಸುರೇಂದ್ರ(55) ಗಾಯಗೊಂಡವರು.
ಮರಳುಗಾರಿಕಾ ಕಾರ್ಮಿಕರಾಗಿ ದುಡಿಯುತ್ತಿರುವ ಸುರೇಂದ್ರ ಅವರು, ಕಲ್ಲೊಟ್ಟು ಸಂತೋಷ್ ಪೂಜಾರಿಯವರ ಮನೆಯ ಜಗಲಿಯಲ್ಲಿ ರಾತ್ರಿ ಮಲಗಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ ಎನ್ನಲಾಗಿದೆ.
ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆಗೆ ಬೋನು ಇಡುವ ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.