ಬೆಂಗಳೂರು: ಪಾಕ್ ಪರ ಘೋಷಣೆ ಪ್ರಕರಣ - ನಾಸಿರ್ ಬೆಂಬಲಿಗ ಸೇರಿದಂತೆ ಮೂವರು ಅರೆಸ್ಟ್
Monday, March 4, 2024
ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ಆರೋಪದಲ್ಲಿ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಇಲ್ತಾಜ್, ಆರ್.ಟಿ.ನಗರದ ಮುನಾವರ್ ಹಾಗೂ ಹಾವೇರಿಯ ಬ್ಯಾಡಗಿಯ ಮೊಹಮದ್ ಶಫಿ ನಾಶಿ ಪುಡಿ ಎಂಬವರು ಬಂಧಿತ ಆರೋಪಿಗಳು. ಎಫ್ ಎಸ್ ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಫೆ.24ರಂದು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ನಾಸೀರ್ ಹುಸೇನ್ ಪರ ಬೆಂಬಲಿಗರು ವಿಧಾನಸೌಧ ಆವರಣದಲ್ಲಿ ಜೈಕಾರ ಕೂಗಿದ್ದರು. ಈ ವೇಳೆ ನಾಸೀರ್ ಬೆಂಬಲಿಗ ನಾಶಿಪುಡಿ ಸೇರಿದಂತೆ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರೋದು ಧೃಡವಾಗಿದೆ. ಇವರು ನಾಸೀರ್ ಸಾಬ್ ಜಿಂದಾಬಾದ್ ಎಂದು ಘೋಷಣೆಯೊಂದಿಗೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿರೋಧ ಪಕ್ಷಗಳು ಆರೋಪಿಗಳನ್ನು ಬಂಧಿಸುವಂತೆ ಸದನದಲ್ಲಿ ಆಗ್ರಹಿಸಿ ಧರಣಿ ನಡೆಸಿದ್ದರು. ಅಲ್ಲದೆ ರಾಜ್ಯಪಾಲರ ಬಳಿ ಬಿಜೆಪಿ ನಿಯೋಗ ದೂರು ನೀಡಿತ್ತು.
ಎಫ್‌ಎಸ್ ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಕೂಗಿರುವುದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಎಫ್‌ಎಸ್ ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ದೃಢವಾದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್ ಎಚ್.ಟಿ ಖಚಿತಪಡಿಸಿದ್ದಾರೆ.