ಮಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ - ಎ.26 ದಕ್ಷಿಣ ಕರ್ನಾಟಕ, ಮೇ 7 ಉತ್ತರ ಕರ್ನಾಟಕ
Saturday, March 16, 2024
ಮಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎಪ್ರಿಲ್ 26ರಂದು ದಕ್ಷಿಣ ಕರ್ನಾಟಕ ಹಾಗೂ ಮೇ 7ರಂದು ಉತ್ತರ ಕರ್ನಾಟಕದ ಚುನಾವಣೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿ, ದೇಶಾದ್ಯಂತ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಹೇಳಿದರು.
18ನೇ ಲೋಕಸಭಾ ಚುನಾವಣೆಗೆ 543 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ. ದೇಶದಲ್ಲಿ ಸುಮಾರು 97 ಕೋಟಿ ಮತದಾರರಿದ್ದಾರೆ. ಇವರಲ್ಲಿ 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. ಸರಿಸುಮಾರು 19.74 ಕೋಟಿ ಯುವ ಮತದಾರರಿದ್ದಾರೆ. ಈ ಚುನಾವಣಾ ಪ್ರಕ್ರಿಯೆಯಲ್ಲಿ 1.5 ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ ಒಟ್ಟು 55 ಲಕ್ಷ ಇವಿಎಂಗಳ ಬಳಕೆ ಮಾಡಲಾಗುತ್ತದೆ. 1.8 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. 10.05 ಲಕ್ಷ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದರು.