ಹುಟ್ಟುಹಬ್ಬಕ್ಕೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಕೇಕ್ ಸೇವಿಸಿ 10ರ ಬಾಲಕಿ ಮೃತ್ಯು
Sunday, March 31, 2024
ಪಾಟಿಯಾಲಾ: ಹುಟ್ಟುಹಬ್ಬದ ಸಂಭ್ರಮಕ್ಕೆಂದು ಆನ್ ಲೈನ್ ನಲ್ಲಿ ಬೇಕರಿಯೊಂದರ ಕೇಕ್ ತರಿಸಿ ತಿಂದ 10ರ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾವಿಗೆ ಕೆಲವೇ ಕ್ಷಣಕ್ಕೆ ಮೊದಲು ಬಾಲಕಿ ಮನ್ವಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬಾಲಕಿ ಮನ್ವಿ ಮಾರ್ಚ್ 24ರಂದು ಸಂಜೆ 7 ಗಂಟೆಯ ಹೊತ್ತಿಗೆ ಕೇಕ್ ಕತ್ತರಿಸಿ ತಿಂದಿದ್ದಾಳೆ. ಆದರೆ ರಾತ್ರಿ 10 ಸುಮಾರಿಗೆ ಕುಟುಂಬದ ಎಲ್ಲರೂ ಅಸ್ವಸ್ಥರಾಗಿದ್ದಾರೆ ಬಾಲಕಿಯ ಎಂದು ತಾತ ಹರ್ಬನ್ ಲಾಲ್ ಹೇಳಿದ್ದಾರೆ. ಮನ್ವಿ ಹಾಗೂ ಆಕೆಯ ತಂಗಿ ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಮನ್ವಿ ವಿಪರೀತ ಬಾಯಾರಿಕೆಯಾಗುತ್ತಿದೆ ಎಂದು ನೀರು ಕೇಳುತ್ತಿದ್ದಳು. ಬಾಯಿ ಒಣಗುತ್ತಿದೆ ಎಂದು ಹೇಳಿ ನಿದ್ರೆಗೆ ಜಾರಿದ್ದಾಳೆ ಎಂದು ಅವರು ವಿವರಿಸಿದ್ದಾರೆ.
ಬಾಲಕಿಯ ದೇಹಸ್ಥಿತಿ ಕ್ಷೀಣಿಸಿದ್ದರಿಂದ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೃತಕ ಉಸಿರಾಟ ವ್ಯವಸ್ಥೆ ಹಾಗೂ ಇಸಿಜಿ ವ್ಯವಸ್ಥೆ ಮಾಡಲಾಯಿತು. ಆದರೆ ಇದಾದ ಸ್ವಲ್ಪಹೊತ್ತಿನಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು ಎಂದು ಹರ್ಬಟ್ಬಾಲ್ ಹೇಳಿದ್ದಾರೆ.
ಕೇಕ್ ಖಾನಾದಿಂದ ಆರ್ಡರ್ ಮಾಡಿರುವ ಚಾಕಲೇಟ್ ಕೇಕ್ ನಲ್ಲಿ ವಿಷಯುಕ್ತ ವಸ್ತು ಇದ್ದಿರಬೇಕು ಎಂದು ಕುಟುಂಬ ಶಂಕೆ ವ್ಯಕ್ತಪಡಿಸಿದೆ. ಬೇಕರಿ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೇಕ್ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.