ಮಂಗಳೂರು: ಹೃದಯಾಘಾತಕ್ಕೆ ಪತ್ನಿ ಬಲಿ - ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆ
Thursday, February 29, 2024
ಮಂಗಳೂರು: ಹೃದಯಾಘಾತದಿಂದ ಪತ್ನಿ ಮೃತಪಟ್ಟ ವಿಚಾರ ತಿಳಿದು ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ನಡೆದಿದೆ.
ಗ್ರಾಮಚಾವಡಿಯ ಸೇಸಪ್ಪ ಪೂಜಾರಿಯವರ ಪತ್ನಿ ಮೀನಾಕ್ಷಿಯವರಿಗೆ ಕಳೆದ ಕೆಲ ತಿಂಗಳ ಹಿಂದೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಅವರು ಗುಣಮುಖವಾಗಿದ್ದರು. ಆದರೆ ಎರಡು ದಿನಗಳ ಹಿಂದೆ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದನ್ನು ತಿಳಿದು ಸೇಸಪ್ಪ ಪೂಜಾರಿಯವರು ಮನನೊಂದು ಆಸ್ಪತ್ರೆಯಿಂದ ಮನೆಗೆ ಬಂದು ವಿಷ ಸೇವಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ತಿಳಿದು ತಕ್ಷಣ ನೆರೆಮನೆಯವರು ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸೇಸಪ್ಪ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗೆ ಮಕ್ಕಳಿರಲಿಲ್ಲ. ಗುರುವಾರ ಪತಿ - ಪತ್ನಿಯ ಮೃತದೇಹಕ್ಕೆ ಜೊತೆಯಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.