ಸಿಂಹದೊಂದಿಗೆ ಸೆಲ್ಫಿ ತೆಗೆಯುತ್ತೇನೆಂದು ಹುಚ್ಚಾಟ ಮೆರೆದ ಯುವಕ - ಆಮೇಲಾದದ್ದು ದುರಂತ...!


ಅಮರಾವತಿ: ಸದ್ಯ ಎಲ್ಲಿ ನೋಡಿದರೂ ಸೆಲ್ಫಿ ಹುಚ್ಚಾಟವೇ ಕಾಣಸಿಗುತ್ತಿರುತ್ತದೆ‌. ಈ ಸೆಲ್ಫಿ ಹುಚ್ಚಾಟ ಪ್ರಾಣ ಸಂಕಟವನ್ನೇ ತಂದಿತ್ತ ಘಟನೆ ನಮಗೆ ಕಾಣ ಸಿಗುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಸೆಲ್ಫಿ ತೆಗೆಯಲು ಹೋಗಿ ದುರಂತಕ್ಕೀಡಾದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದೆ.

ರಾಜಸ್ಥಾನದ ಅಲ್ವಾ‌ರ್ ಮೂಲದ ಪ್ರಹ್ಲಾದ್ ಗುಜ್ಜರ್ (38) ಸೆಲ್ಫಿ ಹುಚ್ಚಾಟದಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ.

ಈ ಬಗ್ಗೆ ಝೂಲಾಜಿಕಲ್ ಪಾರ್ಕ್‌ನ ಅಧಿಕಾರಿ ಸೆಲ್ವಂ ಮಾಹಿತಿ ನೀಡಿ, ಪ್ರಹ್ಲಾದ್ ಗುಜ್ಜ‌ರ್ ಝೂನ ನಿರ್ವಾಹಕರು ಮತ್ತು ವೈದ್ಯಕೀಯ ಸಿಬ್ಬಂದಿಗಾಗಿ ಮೀಸಲಿಟ್ಟಿರುವ ಪ್ರವೇಶ ದ್ವಾರದಿಂದ ಸಿಂಹಗಳಿರುವ ಗುಹೆಗೆ ತೆರಳಿದ್ದಾನೆ. ಆತ ಗುಹೆ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಪ್ರಾಣಿ ಪಾಲಕರು ತಕ್ಷಣ ಆತನನ್ನು ವಾಪಸ್ ಬರುವಂತೆ ಹೇಳಿದ್ದರೂ ಆತ ಒಪ್ಪದೆ ಗುಹೆಯನ್ನು ಪ್ರವೇಶಿಸಿದ್ದಾನರ.

ಆತ 25 ಅಡಿ ಎತ್ತರದ ಬೇಲಿಯನ್ನು ಹಾರಿ ಸಿಂಹಗಳಿರುವ ಜಾಗಕ್ಕೆ ಜಿಗಿದು ಸೆಲ್ಪಿ ತೆಗೆಯಲು ಯತ್ನಿಸಿದ್ದಾನೆ. ಆಗ ಡೊಂಗಲ್‌ಪುರ ಎಂಬ ಹೆಸರಿನ ಸಿಂಹವು ಆತನ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಟುಂಬಸ್ಥರನ್ನು ಸಂಪರ್ಕಿಸಲಾಗಿದ್ದು, ಅವರಿಗೆ ವಿಚಾರ ತಿಳಿಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಝೂಲಾಜಿಕಲ್ ಪಾರ್ಕ್‌ನ ಸೆಲ್ವಂ ತಿಳಿಸಿದ್ದಾರೆ.