ಮದುವೆ ಮಾಡದ ತಾಯಿಯನ್ನು ಕಟ್ಟಿಗೆಯಿಂದ ಬಡಿದು ಕೊಲೆಗೈದ ಪಾಪಿ ಪುತ್ರ


ಕಲಬುರಗಿ: ವಿವಾಹ ಮಾಡಲು ನಿರಾಕರಿಸಿದ ತಾಯಿಯನ್ನು ಪುತ್ರನೇ ಕಟ್ಟಿಗೆಯಿಂದ ಹೊಡೆದು ಹತ್ಯೆಗೈದಿರುವ ಅಮಾನವೀಯ ಘಟನೆ ಕೊಂಚಾವರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಂಚೋಳಿ ತಾಲ್ಲೂಕಿನ ಪೋಚಾವರಂ ಗ್ರಾಮದ ಶೋಭಾ ಅಂಜಪ್ಪ (45) ಹತ್ಯೆಯಾದ ನತದೃಷ್ಟೆ.

ಮದ್ಯವ್ಯಸನಿಯಾಗಿದ್ದ ಪುತ್ರ ಅನಿಲ್ ತನಗೆ ಮದುವೆ ಮಾಡುವಂತೆ ತಾಯಿಯನ್ನು ಪೀಡಿಸುತ್ತಿದ್ದ. ಮದ್ಯದ ಚಟ ಹೊಂದಿರುವ ನೀನೇ ಸರಿಯಾಗಿ ಬದುಕು ನಡೆಸಲು ಆಗುತ್ತಿಲ್ಲ. ನಿನ್ನನ್ನು ತಾನೇ ಸಾಕಬೇಕು. ಇನ್ನು ಮದುವೆ ಮಾಡಿ ಇನ್ನೊಂದು ಹೆಣ್ಣಿನ ಬಾಳೇಕೆ ಹಾಳುಮಾಡಲಿ ಎಂದು ತಾಯಿ ಮದುವೆ ಮಾಡಲು ನಿರಾಕರಿಸಿದ್ದಳು. ಇದರಿಂದ ಕುಪಿತನಾದ ಅನಿಲ್ ಕಟ್ಟಿಗೆಯಿಂದ ಬಡಿದು ತಾಯಿಯನ್ನು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.